ಬೀದರ್ | ವಸತಿ ನಿಲಯದ ಸಿಬ್ಬಂದಿ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿ : ವರದಿ ನೀಡಲು ಸೂಚನೆ

ಬೀದರ್ : ಔರಾದ್ ತಾಲೂಕಿನ ಸಂತಪುರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಸಿಬ್ಬಂದಿ ವಿಜಯ ಅವರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿರುವುದಾಗಿ ದಲಿತ್ ಸೇನೆಯು ದೂರು ನೀಡಿರುವ ಹಿನ್ನೆಲೆಯಲ್ಲಿ, ಇಲಾಖೆಯ ಜಿಲ್ಲಾ ಅಧಿಕಾರಿಗಳು ತನಿಖೆ ನಡೆಸಲು ಸೂಚಿಸಿದ್ದಾರೆ.
ಅಕ್ಟೋಬರ್ 7ರಂದು ಔರಾದ್ ಪಟ್ಟಣದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ವಿಜಯ ಅವರು ಪಾಲ್ಗೊಂಡಿರುವುದಾಗಿ ದಲಿತ್ ಸೇನೆಯು ಪತ್ರದ ಮೂಲಕ ಆರೋಪಿಸಿದ್ದು, ತಕ್ಷಣವೇ ಅವರನ್ನು ಅಮಾನತು ಮಾಡುವಂತೆ ಬೇಡಿಕೆ ಇಟ್ಟಿದೆ.
ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಔರಾದ್ ತಾಲೂಕು ಅಧಿಕಾರಿಗೆ ಪತ್ರ ಬರೆದು, ವಿಷಯವನ್ನು ಕುಲಂಕಷವಾಗಿ ಪರಿಶೀಲಿಸಿ ಲಿಖಿತ ವರದಿ ತಕ್ಷಣ ಕಛೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಔರಾದ್ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ, ಈ ಕುರಿತು ವಸತಿ ನಿಲಯದ ಮೇಲ್ವಿಚಾರಕರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಅವರ ವರದಿ ಬಂದ ತಕ್ಷಣ ಜಿಲ್ಲಾ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.







