ಬೀದರ್ | ಮನೆಗಳ್ಳತನ : 26 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಬೀದರ್ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಮನೆಯಲ್ಲಿದ್ದ 24 ಲಕ್ಷ 80 ಸಾವಿರದ ಚಿನ್ನಾಭರಣ ಮತ್ತು 2 ಲಕ್ಷ ರೂ. ನಗದು ಕಳ್ಳತನ ಮಾಡಿಕೊಂಡು ಹೋದ ಘಟನೆ ನಗರದ ಗುರುನಾನಕ್ ಕಾಲೋನಿಯಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮನೆಯ ಒಡತಿ ರೇಣುಕಾ ಅವರು ದೂರು ನೀಡಿದ್ದು, ನಾವು ಜು. 21 ರಂದು ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗಿದ್ದೆವು. ಮನೆ ನೋಡಿಕೊಳ್ಳಳು ಮನೆ ಕೆಲಸದವಳನ್ನು ಸಿಟ್ ಔಟ್ ಕೋಣೆಯ ಬೀಗ ಕೊಟ್ಟು ಹೋಗಿದ್ದೆವು. ಜು. 23 ರ ಬೆಳಿಗ್ಗೆ ನಮ್ಮ ಮನೆ ಕೆಲಸದವಳು ನಮ್ಮ ಮನೆಯಲ್ಲಿ ಕಳ್ಳತನವಾದ ವಿಷಯಯನ್ನು ಫೋನ್ ಕರೆ ಮಾಡಿ ತಿಳಿಸಿದ್ದಾಳೆ ಎಂದು ಅವರು ಹೇಳಿದ್ದಾರೆ.
ಜು. 24 ರಂದು ನಸುಕಿನ ಜಾವದಲ್ಲಿ ನಾವು ಮನೆಗೆ ಬಂದು ನೋಡಿದಾಗ, ಮನೆಯ ಹಿಂದಿನ ಬಾಗಿಲಿನ ಬೀಗ ಮುರಿದಿತ್ತು. ಮನೆಯಲ್ಲಿನ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಲಾಕರ್ ತೆಗೆದು ನೋಡಿದಾಗ ನಮ್ಮ ಮದುವೆಯಲ್ಲಿ ಉಡುಗೊರೆಯಾಗಿ ಬಂದಿರುವ 1 ಲಕ್ಷ 60 ಸಾವಿರ ಬೆಲೆಯ ಎರಡು ತೊಲೆ ಚಿನ್ನದ ಸರ, 3ಲಕ್ಷ 20 ಸಾವಿರ ಬೆಲೆಯ ನಾಲ್ಕು ತೊಲೆ ಚಿನ್ನದ ಎರಡು ಬಳೆ, 3 ಲಕ್ಷ 20 ಸಾವಿರ ರೂ. ಯ ನಾಲ್ಕು ತೊಲೆ ಚಿನ್ನದ ಪಾಟಲಿ, 1 ಲಕ್ಷ 60 ಸಾವಿರ ಬೆಲೆಯ ಎರಡು ತೊಲೆ ಚಿನ್ನದ ಲಾಕೆಟ್ ಸೇರಿದಂತೆ 1 ಲಕ್ಷ ನಗದು ಹಣ ದೋಚಿದ್ದು ಗೊತ್ತಾಗಿದೆ. ನಂತರ ಮಕ್ಕಳ ಬೇಡ್ ರೂಮಿನ ಲಾಕರ್ ನೋಡಿದಾಗ ನಮ್ಮಣ್ಣ ತಂದು ಇಟ್ಟಿದ್ದ 8 ಲಕ್ಷ ರೂ. ಮೌಲ್ಯದ 10 ತೊಲೆ ಚಿನ್ನದ ಆರು ಬಳೆ, 4 ಲಕ್ಷ ರೂ. ಮೌಲ್ಯದ ಐದು ತೊಲೆಯ ಎರಡು ಚಿನ್ನದ ಪಾಟಲಿ, 3 ಲಕ್ಷ 20 ಸಾವಿರ ರೂ. ಮೌಲ್ಯದ ಒಂದು ಘಂಟನ್ ಚೈನ್ ಮತ್ತು ಅಲ್ಲಿದ್ದ 1 ಲಕ್ಷ ರೂ. ನಗದು, ಹೀಗೆ ಒಟ್ಟು 24 ಲಕ್ಷ 80 ಸಾವಿರ ರೂ. ಬೆಲೆ ಬಾಳುವ 31 ತೊಲೆ ಚಿನ್ನದ ಆಭರಣ ಹಾಗೂ 2 ಲಕ್ಷ ರೂ. ನಗದು ಹಣ ಕಳ್ಳತನ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.







