ಬೀದರ್ | ಮನೆ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ : ಪ್ರಕರಣ ದಾಖಲು

ಬೀದರ್ : ಮನೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಘಟನೆ ಭಾಲ್ಕಿ ನಗರದ ಬಸವೇಶ್ವರ್ ಕಾಲೋನಿಯಲ್ಲಿ ನಡೆದಿದ್ದು, ಮಂಗಳವಾರ ಪ್ರಕರಣ ದಾಖಲಾಗಿದೆ.
ಮೂಲತಃ ಹೊಳಸಮುದ್ರ ಗ್ರಾಮದವರಾದ ದೇವೇಂದ್ರ ಅವರು ಭಾಲ್ಕಿಯ ಬಸವೇಶ್ವರ್ ಕಾಲೋನಿಯಲ್ಲಿ ಮನೆ ಮಾಡಿದ್ದರು. ದೀಪಾವಳಿ ಹಬ್ಬಕ್ಕೆಂದು ತಮ್ಮ ಸ್ವಂತ ಗ್ರಾಮಕ್ಕೆ ಅವರು ಕುಟುಂಬ ಸಹಿತ ಹೋದಾಗ ಭಾಲ್ಕಿಯ ಅವರ ಮನೆಯಲ್ಲಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಮನೆ ಬೀಗ ಮುರಿದು ಬೇಡ್ ರೂಮಿನಲ್ಲಿರುವ ಕಬ್ಬಿಣದ ಅಲಮಾರೆಯಲ್ಲಿಟ್ಟಿದ್ದ 84 ಸಾವಿರ ರೂ. ಬೆಲೆ ಬಾಳುವ 1 ತೊಲೆ ಚಿನ್ನ, 40 ಸಾವಿರ ರೂ. ಬೆಲೆ ಬಾಳುವ 20 ಬೆಳ್ಳಿ ದೇವರ ವಿಗ್ರಹಗಳು ಹಾಗೂ 25 ಸಾವಿರ ರೂ. ನಗದು ಹಣ ಹೀಗೆ ಒಟ್ಟು 1 ಲಕ್ಷ 49 ಸಾವಿರ ರೂ. ವಸ್ತುಗಳು ಕಳ್ಳತನವಾಗಿದೆ ಎಂದು ಅವರು ದೂರು ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ ಎಂದು ತಿಳಿದು ಬಂದಿದೆ.
Next Story





