ಬೀದರ್ | ನಿರ್ಗತಿಕ ಅಲೆಮಾರಿ ಸಮುದಾಯದ ಜನರಿಗೆ ವಸತಿ ಸೌಲಭ್ಯ ಒದಗಿಸಿಕೊಟ್ಟಿಲ್ಲ : ಡಾ.ನಾಗಲಕ್ಷ್ಮಿ ಚೌಧರಿ

ಬೀದರ್ : ವರ್ಷಗಳು ಕಳೆದರೂ ಕೂಡ ಇಲ್ಲಿವರೆಗೆ ನಿರ್ಗತಿಕ ಅಲೆಮಾರಿ ಸಮುದಾಯದ ಜನರಿಗೆ ವಸತಿ ಸೌಲಭ್ಯ ಒದಗಿಸಿಕೊಟ್ಟಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಿಡಿ ಕಾರಿದ್ದರು.
ಇಂದು ಔರಾದ್ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಅಲೆಮಾರಿ ಸಮುದಾಯದ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳು ವಿಚಾರಿಸಿದರು. ಈ ಸಮುದಾಯದ ಜನರಿಗೆ ವಸತಿ ನೀಡಿ ಎಂದು ನ್ಯಾಯಾಲಯ ಆದೇಶ ಹೊರಡಿಸಿ 8 ವರ್ಷ ಕಳೆದರೂ ಕೂಡ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ತಡವಾಗಿ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.
ಸರಕಾರದ ಸಂಬಳ ಪಡೆಯುವ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದ್ದರೆ, ಅಲೆಮಾರಿಗಳ ಸಮಸ್ಯೆ ಆಲಿಸಲು ನಾನು ಬೆಂಗಳೂರಿನಿಂದ ಇಲ್ಲಿವರೆಗೆ ಬರುವ ಅಗತ್ಯವಿರಲಿಲ್ಲ. ಈ ಜನರಿಗೆ ನೀರು ಒದಗಿಸಲಿಲ್ಲ ಎಂದರೆ ನಿಮ್ಮ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು, ವೈದ್ಯ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ಉತ್ತಮವಾಗಿ ವರ್ತಿಸಬೇಕು. ಬಡವರಿಗೆ ಗುಣಮಟ್ಟದ ಆರೋಗ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಲ್ಲಿನ ವೈದ್ಯರಿಗೆ ಸೂಚಿಸಿದರು.
ನಂತರ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ವಸತಿ ನಿಲಯದ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು. ವಸತಿ ನಿಲಯ ಪಾಲಕರು ನಮಗೆ ಮೂಲಭೂತ ಸೌಕರ್ಯಗಳು ಮರಿಚಿಕೆ ಮಾಡಿದ್ದಾರೆ. ನಮಗೆ ಪ್ರತಿ ತಿಂಗಳು ನೀಡುವ ಕಿಟ್ ಗಳು ಸಹ ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಅವಧಿ ಮುಗಿದ ಕಿಟ್ ಗಳನ್ನು ನೀಡುತ್ತಾರೆ. ಹಲವಾರು ತಿಂಗಳಿನಿಂದ ಸ್ವಚ್ಚತೆ ಮಾಡುವ ಕೆಲಸ ಮಾಡುತ್ತಿಲ್ಲ. ನಮಗೆ ಸರಿಯಾದ ಸಮಯಕ್ಕೆ ಊಟ ನೀಡುವುದಿಲ್ಲ ಎಂದು ಅಲ್ಲಿನ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆ ಹೇಳಿಕೊಂಡಾಗ ಅಲ್ಲಿಯೇ ಇದ್ದ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯತ್ ಇಒ ಮಾಣಿಕರಾವ್ ಪಾಟೀಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರವೀಂದ್ರ ಮೇತ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್, ಸಿಡಿಪಿಒ ಇಮಲಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ತಾಲ್ಲೂಕು ಪಂಚಾಯತ್ ಎಡಿ ಶಿವಕುಮಾರ್ ಘಾಟೆ, ಡಾ.ಶಂಕರರಾವ್ ದೇಶಮುಖ್ ಹಾಗೂ ಪಿಎಸ್ಐ ವಾಸೀಂ ಪಟೇಲ್ ಸೇರಿದಂತೆ ಅನೇಕರು ಇದ್ದರು.







