Bidar | ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

ಬೀದರ್: ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪರಿವರ್ತನ ಸಂಘದ ನೇತೃತ್ವದಲ್ಲಿ ಬೀದರ್ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಶುಕ್ರವಾರ ಎರಡನೇ ದಿನಕ್ಕೆ ಮುಂದುವರಿಯಿತು.
ಆ.6ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಸಂಘದ ಮುಖಂಡರು, ಎರಡು ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದ್ದರು. ಅದರಂತೆ ಆ.13ರಂದು ಆರಂಭವಾದ ಸತ್ಯಾಗ್ರಹ ಬೇಡಿಕೆಗಳು ಈಡೇರುವವರೆಗೆ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪರೀಕ್ಷಾ ಹಾಗೂ ಪ್ರವೇಶ ಶುಲ್ಕವನ್ನು ಕಡಿತಗೊಳಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿ ವ್ಯವಸ್ಥೆಯನ್ನು ತಕ್ಷಣ ರದ್ದುಪಡಿಸಬೇಕು. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಕುರಿತು ಸಮಗ್ರ ತನಿಖೆ ನಡೆಸಬೇಕು. ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆಗಳ ಜೆರಾಕ್ಸ್ ಪ್ರತಿಗಳನ್ನು ನೀಡಿ ಪರೀಕ್ಷೆ ನಡೆಸಿರುವ ಪ್ರಕರಣದ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ತಮ್ಮ ಬೇಡಿಕೆಗಳು ಈಡೇರುವವರೆಗೆ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವುದಿಲ್ಲ. ವಿಶ್ವವಿದ್ಯಾಲಯ ಆಡಳಿತ ಹಾಗೂ ಸರ್ಕಾರ ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಕರ್ನಾಟಕ ಪರಿವರ್ತನ ಸಂಘದ ಜಿಲ್ಲಾಧ್ಯಕ್ಷ ಪವನ್ ಮಿಠಾರೆ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸಲಹೆಗಾರ ಸೂರ್ಯಕಾಂತ್ ಸಾದುರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾವ್ ಮಾಲಗತ್ತಿ, ಉಪಾಧ್ಯಕ್ಷ ನಾಗಸೇನ ಗಾಯಕವಾಡ್, ಮಹೇಶ್ ಭಾವಿದೊಡ್ಡಿ, ಸಂತೋಷ್ ಏಣಕುರೆ, ಸತೀಶ್ ಕಾಂಬ್ಳೆ, ಹರ್ಷಿತ್ ದಾಂಡೇಕರ್, ಜೈಪಾಲ್ ಕಾಣಜಿ, ಹರೀಶ್ ಖಂಡೆ, ಸಿದ್ಧಾರ್ಥ ಭಾವಿದೊಡ್ಡಿ, ದಿಲೀಪ್, ಗೌತಮ್ ಮೀಸೆ ಹಾಗೂ ಶಿವಸಾಗರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






