Bidar | ಚಾಂದೋರಿ ಗ್ರಾಪಂನಲ್ಲಿ ನಡೆದ ಅನುದಾನ ದುರ್ಬಳಕೆಗೂ ನನಗೂ ಸಂಬಂಧವಿಲ್ಲ : ದೀಪಕ್ ಪಾಟೀಲ್

ಬೀದರ್: ಕಮಲನಗರ ತಾಲೂಕಿನ ಚಾಂದೋರಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸರ್ಕಾರದ ಅನುದಾನ ದುರ್ಬಳಕೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಕುರಿತು ಲೋಕಾಯುಕ್ತ, ಸಿಐಡಿ, ಎಸ್‌ಐಟಿ ಸೇರಿದಂತೆ ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ ಎಂದು ಚಾಂದೋರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ಚಾಂದೋರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ತಮ್ಮ ಹೆಸರಿಗೆ ಕಪ್ಪು ಮಸಿ ಬಳಿಯುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರವೀಣ್ ಕಾರಬಾರಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪ್ರಕರಣದಲ್ಲಿ ತಮ್ಮ ಪಾತ್ರ ಸಾಬೀತುಪಡಿಸಲಾಗದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.
ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪಾರದರ್ಶಕ ಆಡಳಿತ ನೀಡಿದ್ದಾಗಿ ತಿಳಿಸಿದ ದೀಪಕ್ ಪಾಟೀಲ್, 2015-16ರಲ್ಲಿ ಚಾಂದೋರಿ ಗ್ರಾಮ ಪಂಚಾಯಿತಿಗೆ ಜಿಲ್ಲೆಯ ಮೊದಲ ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಿತ್ತು. ಜಂಶೆಡ್ಪುರದಲ್ಲಿ ಪ್ರಧಾನಮಂತ್ರಿ ನಡೆಸಿದ ಸಂವಾದಕ್ಕೆ ಜಿಲ್ಲೆಯಿಂದ ತಮ್ಮನ್ನು ಆಯ್ಕೆ ಮಾಡಲಾಗಿತ್ತು ಎಂದು ಹೇಳಿದರು.
ಪ್ರವೀಣ್ ಕಾರಬಾರಿ ಅವರು ಔರಾದ್ ಶಾಸಕರ ಆಪ್ತರಾಗಿದ್ದು, ಹೊಸ ಸಹಕಾರಿ ಬ್ಯಾಂಕ್ ಸ್ಥಾಪನೆಗಾಗಿ ಶಾಸಕರನ್ನು ಮೆಚ್ಚಿಸಲು ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ತಮ್ಮ ವಿರುದ್ಧದ ಆರೋಪಗಳು ಔರಾದ್ ಶಾಸಕರ ವಿರುದ್ಧ ನಡೆಸುತ್ತಿರುವ ಭ್ರಷ್ಟಾಚಾರ ಮತ್ತು ಭೂ ಕಬಳಿಕೆ ಹೋರಾಟವನ್ನು ತಡೆಯುವ ಪ್ರಯತ್ನವಾಗಿದೆ. ಆದರೆ ಇದಕ್ಕೆ ತಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಾಂದೋರಿ ಗ್ರಾಮ ಪಂಚಾಯಿತಿಯ ಅನುದಾನ ದುರ್ಬಳಕೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆದರೆ ಪ್ರವೀಣ್ ಕಾರಬಾರಿ ಅವರ ಪಾತ್ರವೂ ಬಹಿರಂಗವಾಗಲಿದೆ. ತಮ್ಮ ವಿರುದ್ಧ ಸುಳ್ಳು ಆರೋಪ ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಔರಾದ್ ಶಾಸಕರ ಸೂಚನೆಯಂತೆ ಕಾರಬಾರಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಇದೀಗ ಬಿಜೆಪಿ ತಾಲೂಕು ಅಧ್ಯಕ್ಷರಾಗುವ ಉದ್ದೇಶದಿಂದ ಸಂಬಂಧವಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೀಪಕ್ ಪಾಟೀಲ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.






