ಬೀದರ್ | ಮುಂಗಾರು ಅಧಿವೇಶನದ ಮುನ್ನ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಹೋರಾಟ ನಡೆಸಲಾಗುವುದು : ಝಾಪಟರಾಜ್ ಕಡ್ಯಾಳ್

ಬೀದರ್ : ರಾಜ್ಯ ಸರ್ಕಾರ ಮುಂಗಾರು ಅಧಿವೇಶನಕ್ಕೂ ಮುನ್ನ ಒಳ ಮೀಸಲಾತಿ ಜಾರಿ ಮಾಡದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಝಾಪಟರಾಜ್ ಕಡ್ಯಾಳ್ ಅವರು ಎಚ್ಚರಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಅವರ ಸಮೀಕ್ಷಾ ವರದಿಯು ಜು.30 ರ ಒಳಗಾಗಿ ಸಲ್ಲಿಸಬೇಕು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿವೇಶನದಲ್ಲಿ ಒಳಮೀಸಲಾತಿ ಈಡೇರಿಕೆಗಾಗಿ ತಮ್ಮ ಬದ್ಧತೆ ಪ್ರಕಟಿಸಲಿ ಎಂದ ಅವರು, ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಅಂಗೀಕರಿಸಲು ಆಗ್ರಹಿಸಿ ಆ.11 ರಿಂದ ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಆಹೋರಾತ್ರಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎರಡು ತಿಂಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಜನಸಂಖ್ಯಾ ಸಮೀಕ್ಷೆ ಪೂರ್ಣಗೊಳಿಸಿ, ತಮ್ಮ ನೈತಿಕ ಜವಾಬ್ದಾರಿ ಪೂರೈಸಿದ್ದರೆ 30 ವರ್ಷಗಳ ಒಳ ಮೀಸಲಾತಿ ಹೋರಾಟವು ಮತ್ತೊಂದು ಸುತ್ತಿನ ಹೋರಾಟವಾಗಿ ಪರಿವರ್ತನೆಯಾಗುವ ಅಗತ್ಯವಿರಲಿಲ್ಲ. ಈಗಲಾದರೂ ಇಂತಹ ನಿರ್ಲಕ್ಷ್ಯ ಧೋರಣೆ ಮುಂದುವರೆಸದೆ ಆಡಳಿತರೂಢ ಕಾಂಗ್ರೆಸ್ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ತಮ್ಮ ಬದ್ಧತೆ ಪ್ರಕಟಿಸಬೇಕಾಗಿದೆ ಎಂದರು.
ಒಳಮೀಸಲಾತಿಯನ್ನು ಅಧಿವೇಶನದಲ್ಲಿ ಸರ್ವಪಕ್ಷಗಳು ಅಂಗೀಕರಿಸಿದರೆ ,ನೇಮಕಾತಿ ಆಗಬೇಕಾದ 30 ಸಾವಿರಕ್ಕೂ ಅಧಿಕ ಹುದ್ದೆಗಳು ವಂಚಿತ ನಿರುದ್ಯೋಗಿ ಯುವಕ, ಯುವತಿಯರು ಪಡೆಯಬಹುದಾಗಿದೆ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸಂಜೀವಕುಮಾರ ಬೇಂದ್ರೆ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಯುವ ಘಟಕದ ಅಧ್ಯಕ್ಷ ಮಲ್ಲಿಕ್ ಮಡಿಗೆ, ಜಿಲ್ಲಾ ಕಾರ್ಯಾಧ್ಯಕ್ಷ ಯುವರಾಜ್ ಭೇಂಡೆ, ಜಿಲ್ಲಾ ಉಪಾಧ್ಯಕ್ಷ ಸಿ.ಎಮ್ ದಾಸ್, ಜಿಲ್ಲಾ ಯುವ ಅಧ್ಯಕ್ಷ ಜೀವನ್ ರಿಕ್ಕೆ, ಮೈಕಲ್ ಕೊಡ್ಡಿಕರ್, ರೋಹನ್, ಸುಮಂತ್ ಮೇತ್ರೆ, ಹಣಮಂತ್ ಸೂರ್ಯವಂಶಿ, ಅಶೋಕ್ ದರ್ಬಾರೆ, ದಯಾನಂದ್ ಮೇತ್ರೆ ಹಾಗೂ ಬಾಬುರಾವ್ ಮಣಗೆರೆ ಇದ್ದರು.







