Bidar | ಅ.2 ರಂದು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ : ರಾಜಶೇಖರ್ ಪಾಟೀಲ್

ಬೀದರ್: ನಗರದ ಪ್ರತಾಪನಗರದಲ್ಲಿರುವ ವಿಆರ್‌ಸಿ ಕಲ್ಯಾಣ ಮಂಟಪದಲ್ಲಿ ಅ.2ರಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡಿರುವ ಅಬ್ದುಲ್ ಮನ್ನಾನ್ ಸೇಠ್ ಅವರ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲಾಧ್ಯಕ್ಷರ ಆಯ್ಕೆ ಬಹಳಷ್ಟು ಪಾರದರ್ಶಕವಾಗಿ ನಡೆದಿದೆ. ದೆಹಲಿಯಿಂದ ಉಸ್ತುವಾರಿಗಳು ಹಾಗೂ ಅಬ್ಜರ್ವರ್ ಆಗಮಿಸಿ ಜಿಲ್ಲೆಯಲ್ಲಿ ಠಿಕಾಣಿ ಹೂಡಿ, ಇಡೀ ಜಿಲ್ಲೆಯಲ್ಲಿ ಸಂಚರಿಸಿ ಕಾರ್ಯಕರ್ತರ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಸಂಗ್ರಹಿಸಿದ್ದಾರೆ. ಬಳಿಕ ಅಬ್ದುಲ್ ಮನ್ನಾನ್ ಸೇಠ್ ಅವರನ್ನು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇದು ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕ ಆಯ್ಕೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಮುಂಬರುವ ಚುನಾವಣೆಗಳನ್ನು ಎದುರಿಸಬೇಕಾಗಿದೆ. ಮನ್ನಾನ್ ಸೇಠ್ ಅವರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಪಕ್ಷ ಸಂಘಟಿಸುವ ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನಾವೆಲ್ಲರೂ ಅವರೊಂದಿಗೆ ಇದ್ದು ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ವಿಧಾನ ಪರಿಷತ್ ಸದಸ್ಯರು, ಪಕ್ಷದ ಮುಖಂಡರು, ತಾಲೂಕು ಮಟ್ಟದ ಅಧ್ಯಕ್ಷರು, ಇತರೆ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಮಾಜಿ ಎಂಎಲ್ಸಿ ಅರವಿಂದಕುಮಾರ್ ಅರಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಂಕರ್ ದೊಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಶಂಕರ್ ರಡ್ಡಿ ಚಿಟ್ಟಾ, ಪ್ರದೀಪ್ ಕುಶನೂರ್, ಅಜಮತ್ ಪಟೇಲ್, ವೈಜಿನಾಥ್ ಎನಗುಂದೆ ಹಾಗೂ ಲಕ್ಷ್ಮಣ್ ಬುಳ್ಳಾ ಉಪಸ್ಥಿತರಿದ್ದರು.






