Bidar | ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸಿ ಸ್ವಾವಲಂಬನೆ ಸಾಧಿಸಿ: ಡಿಸಿ ಶಿಲ್ಪಾ ಶರ್ಮಾ

ಬೀದರ್: ಎಣ್ಣೆಕಾಳು ಬೆಳೆಗಳಲ್ಲಿ ಸ್ವಾವಲಂಬನೆ ಸಾಧಿಸಲು ಒತ್ತು ನೀಡಬೇಕು. ರೈತರು ಎಣ್ಣೆಕಾಳು ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸಲಹೆ ನೀಡಿದರು.
ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬೀದರ್ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಖಾದ್ಯತೈಲ ಅಭಿಯಾನ (ಎಣ್ಣೆಕಾಳು) ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ವಸ್ತುಪ್ರದರ್ಶನದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಖಾದ್ಯತೈಲ ಅಭಿಯಾನ (ಎಣ್ಣೆಕಾಳು) ಯೋಜನೆಯಡಿ ಕೃಷಿ ಇಲಾಖೆಯ ಮೂಲಕ ಕುಸುಬೆ, ಶೇಂಗಾ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಸ್ಥಳೀಯವಾಗಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಬೇಕು. ಜಿಲ್ಲೆಯಲ್ಲಿ ಎಣ್ಣೆಕಾಳುಗಳನ್ನು ಬೆಳೆದು, ಇತರ ಜಿಲ್ಲೆಗಳು ಹಾಗೂ ರಾಜ್ಯಗಳಿಗೂ ಪೂರೈಸುವಂತಾಗಬೇಕು ಎಂದು ರೈತರಿಗೆ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ರೈತರು ಎಣ್ಣೆಕಾಳು ಕೃಷಿಯತ್ತ ಒಲವು ತೋರಿ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಅದರೊಂದಿಗೆ ಶುದ್ಧ ಖಾದ್ಯತೈಲವನ್ನು ಬಳಸಬೇಕು ಎಂದರು.
ಎಣ್ಣೆಕಾಳು ಬೆಳೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಣ್ಣೆಕಾಳುಗಳ ಕೊಯ್ಲೋತ್ತರ ಸಂಸ್ಕರಣಾ ಘಟಕಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಖರೀದಿಸಲು ರೈತರು, ಸರ್ಕಾರೇತರ ಸಂಸ್ಥೆಗಳು, ರೈತ ಉತ್ಪಾದಕ ಸಂಘಗಳು ಹಾಗೂ ಸ್ವಸಹಾಯ ಗುಂಪುಗಳಿಗೆ ಯೋಜನಾ ವೆಚ್ಚದ ಶೇ. 33ರಷ್ಟು ಅಥವಾ ಗರಿಷ್ಠ 9.90 ಲಕ್ಷ ರೂ.ಗಳವರೆಗೆ ಸಹಾಯಧನ ಒದಗಿಸಲಾಗುವುದು ಎಂದು ತಿಳಿಸಿದರು.
ಔರಾದ್ (ಬಾ) ಸಹಾಯಕ ಕೃಷಿ ನಿರ್ದೇಶಕ ಮಾರ್ತಾಂಡ ಅವರು ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಿಸುವಲ್ಲಿ ಹಾಗೂ ರೈತರ ಆದಾಯ ವೃದ್ಧಿಸುವಲ್ಲಿ ತಂತ್ರಜ್ಞಾನಗಳ ಪಾತ್ರದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಹಾಗೂ ವಿಜ್ಞಾನಿ ಡಾ. ಭವಾನಿ, ವಿಜ್ಞಾನಿಗಳಾದ ಡಾ. ಆರ್.ಎಲ್. ಜಾಧವ್ ಮತ್ತು ಡಾ. ಸುನಿಲ್ ಎಂ.ಎನ್., ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜಶೇಖರ್ ಬಸನಾಯಕ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ರೈತರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಕೃಷಿ ಸಖಿಯರು ಉಪಸ್ಥಿತರಿದ್ದರು. ಬೀದರ್ ಉಪ ಕೃಷಿ ನಿರ್ದೇಶಕ-1 ಅನ್ಸಾರಿ ಎಂ.ಎ.ಕೆ. ವಂದನಾರ್ಪಣೆ ಮಾಡಿದರು.






