Bidar | ಭಾರತದ ಹಬ್ಬಗಳು ಹೊಸ ಪರಂಪರೆ ಕಟ್ಟಿಕೊಡುತ್ತವೆ: ಪುಷ್ಪಾವತಿ ಚಿರ್ಕುತೆ

ಬೀದರ್: ಭಾರತದ ಹಬ್ಬಗಳು ಹೊಸ ಪರಂಪರೆಗಳನ್ನು ಕಟ್ಟಿಕೊಡುತ್ತವೆ ಎಂದು ಸಾಹಿತಿ ಪುಷ್ಪಾವತಿ ಚಿರ್ಕುತೆ ಹೇಳಿದರು.
ಭಾಲ್ಕಿ ತಾಲೂಕಿನ ಹಲಬರ್ಗಾ ಹೋಬಳಿಯ ಕೆಪಿಎಸ್ ಪ್ರೌಢಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ್ ಹಾಗೂ ಕೆಪಿಎಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಭಾರತದ ಹಬ್ಬಗಳ ವೈಚಾರಿಕ ನೆಲೆಗಳು’ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಬ್ಬಗಳ ಆಚರಣೆಯ ಮಹತ್ವವನ್ನು ಮಕ್ಕಳಿಗೂ ತಿಳಿಸಬೇಕು. ಇಂದಿನ ಯುವ ಪೀಳಿಗೆಗೆ ನಮ್ಮ ಸಂಪ್ರದಾಯಗಳ ಮಹತ್ವ ಹಾಗೂ ಅವುಗಳ ಹಿನ್ನೆಲೆಯನ್ನು ಅರ್ಥ ಮಾಡಿಸಬೇಕು ಎಂದು ಅವರು ಹೇಳಿದರು.
ಧನಲಕ್ಷ್ಮಿ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿ, ನಮ್ಮ ದೇಶದಲ್ಲಿ ರಾಷ್ಟ್ರೀಯ ಹಬ್ಬಗಳು ಹಾಗೂ ಸಾರ್ವಜನಿಕ ಹಬ್ಬಗಳಿವೆ. ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಆಚರಿಸುವ ಮೂಲಕ ಪರಸ್ಪರ ಸೌಹಾರ್ದತೆ ಬೆಳೆಸಬೇಕು. ದಸರಾ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಆಚರಣೆಯ ಮಹತ್ವವನ್ನು ಅರಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಿಯದರ್ಶಿನಿ ಮದನಗಾಂವಕರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಇಂತಹ ಉಪನ್ಯಾಸಗಳು ಪ್ರೇರಣಾದಾಯಕವಾಗಿವೆ. ಹಬ್ಬಗಳನ್ನು ಆಚರಿಸುವ ಉದ್ದೇಶ ಹಾಗೂ ಅವುಗಳ ಹಿಂದಿರುವ ಆಶಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ನುಡಿದರು.
ದೈಹಿಕ ಶಿಕ್ಷಕಿ ಅಕ್ಕನಾಗಮ್ಮ ಹಾಲಳ್ಳಿ ಮಾತನಾಡಿ, ಹಬ್ಬಗಳ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಂಗಮ್ಮ ಶೀಲವಂತ್, ಅನುರಾಧಾ ಪಾಟೀಲ್, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ. ಸೇರಿದಂತೆ ಪ್ರೌಢಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






