ಬೀದರ್ | ಗ್ರಾಮಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿ : ಮಲ್ಲಿಕಾರ್ಜುನ್ ಗುಂಗೆ

ಬೀದರ್ : ಇಂಜಿನಿಯರ್ ಪಿತಾಮಹ ಸರ್ ಎಂ.ವಿಶ್ವೇಶ್ವರಯ್ಯನವರು ಕಂಡ ಕನಸು ನನಸಾಗಬೇಕಾದರೆ ಗ್ರಾಮಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಈ ಕಾರ್ಯಗಳನ್ನು ಇಂದಿನ ಅಭಿಯಂತರರು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಪರಿಶ್ರಮದಿಂದ ಮಾಡಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ಅವರು ತಿಳಿಸಿದರು.
ಇಂದು ನಗರದ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಬೀದರ್ ಜಿಲ್ಲಾ ಘಟಕದ ವತಿಯಿಂದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವೇಶ್ವರಯ್ಯನವರು ಈ ದೇಶ ಕಂಡ ಅಪ್ರತಿಮ ದೂರದೃಷ್ಟಿಯುಳ್ಳ ರಾಷ್ಟ್ರ ನಿರ್ಮಾತೃರಾಗಿದ್ದಾರೆ. ಗ್ರಾಮಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಮೂಲಭೂತ ಸೌಕರ್ಯಗಳು ಒದಗಿಸಿದಾಗ ಮಾತ್ರ ಈ ದೇಶದ ಉದ್ಧಾರ ಸಾಧ್ಯ ಎಂದು ಅವರು ತಿಳಿಸಿdರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಮಣಗೆ ಅವರು ಮಾತನಾಡಿದರು.
ಇದೇ ವೇಳೆ ಹಿರಿಯ ಇಂಜಿನಿಯರ್ ರಾದ ವಿಲಾಸಕುಮಾರ್ ಮಾಶೆಟ್ಟಿ ಹಾಗೂ ಸುಧಾಕರ ಗರ್ಜೆ ಅವರನ್ನು ಅತ್ಯುತ್ತಮ ಇಂಜಿನಿಯರ್ ಎಂದು ಸನ್ಮಾನಿಸಿ ಗೌರವಿಸಲಾಯಿತು. ಡಿಪ್ಲೋಮಾ ಇಂಜಿನಿಯರ್ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ಪ್ರೀತಿ ಧನ್ನೂರೆ ಹಾಗೂ ಐಶ್ವರ್ಯ ವಿಶ್ವನಾಥ್ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಜಾಲನಾದ ಎಸ್ ಆರ್ ಜೆ ಪೀಟಿ ಸ್ಟೀಲ್ಸ್ ನ ಪ್ರಾದೇಶಿಕ ವ್ಯವಸ್ಥಾಪಕ ವಲ್ಲಭ ಪಾತುರಕರ್, ಅಭಿಯಂತರರಾದ ಓಂಕಾರ್ ಪಾಟೀಲ್, ಶಿವಕುಮಾರ್ ಪಾಟೀಲ್, ಕಿರಣ್ ಗುರುಮೂರ್ತಿ, ಪ್ರಮುಖರಾದ ಶಿವಶರಣಪ್ಪ ವಾಲಿ, ಬಿ.ಎಸ್.ಕುದರೆ, ಅನೀಲಕುಮಾರ್ ಔರಾದೆ, ರಾಜಶೇಖರ್ ಕರ್ಪೂರ್, ಶಾಂತಕುಮಾರ್ ಚಂದಾ, ದಿಲೀಪ್ ನಿಟ್ಟೂರೆ, ಅಂಬಾದಾಸ್ ಉಜನಿಕರ್, ರಾಜಶೇಖರ್ ಮಠ, ಅಮರನಾಥ್ ಕಣಜಿ ಹಾಗೂ ಸುನೀಲ್ ಬಿರುಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







