Bidar | ಬರ ಘೋಷಣೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಅನ್ಯಾಯ : ಶ್ರೀಕಾಂತ್ ಸ್ವಾಮಿ

ಬೀದರ್: ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿರುವ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಕೈಬಿಟ್ಟಿರುವುದು ಅನ್ಯಾಯವಾಗಿದೆ ಎಂದು ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್, ಹುಮನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಆದರೆ ಔರಾದ್, ಕಮಲನಗರ್, ಭಾಲ್ಕಿ ಹಾಗೂ ಹುಲಸೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಿಂದ ಜಿಲ್ಲೆಯ ನಾಲ್ಕು ತಾಲೂಕುಗಳ ರೈತರಿಗೆ ಅನ್ಯಾಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಈ ಬಾರಿ ಸಮರ್ಪಕ ಮಳೆಯಾಗಿಲ್ಲ. ಸುಮಾರು ಶೇ.30ರಿಂದ 40ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯೇ ಸಾಧ್ಯವಾಗಿಲ್ಲ. ಬಿತ್ತನೆಯಾದ ಶೇ.60ರಷ್ಟು ಜಮೀನಿನಲ್ಲೂ ಮಳೆ ಕೊರತೆಯಿಂದ ಸುಮಾರು ಶೇ.75ರಷ್ಟು ಬೆಳೆ ಒಣಗಿವೆ. ಉಳಿದ ಶೇ.25ರಷ್ಟು ಬೆಳೆಗಳಲ್ಲಿ ಕೇವಲ ಶೇ.10ರಷ್ಟು ಬೆಳೆಗಳಿಗೆ ಮಾತ್ರ ಹೂವು ಹಾಗೂ ಕಾಯಿ ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಮಳೆ ಕೊರತೆಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಅರ್ಹ ರೈತರಿಗೆ ಬರ ಪರಿಹಾರ ಒದಗಿಸಬೇಕು ಎಂದು ಶ್ರೀಕಾಂತ್ ಸ್ವಾಮಿ ಆಗ್ರಹಿಸಿದ್ದಾರೆ.






