Bidar | ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ವಿನೂತನ ಸೇವಾ ಕಾರ್ಯಕ್ರಮ : ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬೀದರ್ ಜಿಲ್ಲಾದ್ಯಂತ 13ಕ್ಕೂ ಹೆಚ್ಚು ವಿನೂತನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ‘ಆಶೀರ್ವಾದ್ ಕಾ ದಿಯಾ’ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ 11, 21 ಅಥವಾ 100 ದೀಪಗಳನ್ನು ಬೆಳಗಿಸಿ ದೇಶದ ಅಭಿವೃದ್ಧಿ ಹಾಗೂ ಜನರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಲೆ-ಕಾಲೇಜುಗಳಲ್ಲಿ ರಂಗೋಲಿ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳು, ನಮೋ ಸೇವಾ ಖಾತೆ, ಬೀದಿ ನಾಟಕ, ಅಂಗನವಾಡಿ ಮಿಲನ, ಸೇವಾ ಜ್ಯೋತಿ ಸಂಕಲ್ಪ ಯಾತ್ರೆ, ರಕ್ತದಾನ ಶಿಬಿರ, ವೃಕ್ಷಾರೋಪಣ, ಪ್ಲಾಸ್ಟಿಕ್ ಮುಕ್ತ ಬೀದರ್ ಅಭಿಯಾನ, ಅಂಗದಾನ ಸಂಕಲ್ಪ ಹಾಗೂ ಸೈಬರ್ ಭದ್ರತೆ ಕುರಿತು ಜಾಗೃತಿ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಅಕ್ಟೋಬರ್ 17ರವರೆಗೆ ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣವಿಲ್ಲದೆ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಮಾತನಾಡಿ, ವಿರೋಧ ಪಕ್ಷದ ಕಾರ್ಯಕರ್ತರ ಧ್ವನಿ ಅಡಗಿಸಲು ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಭಾಲ್ಕಿ ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಸಂಜು ಶಿಂದೆ ವಿರುದ್ಧ ಯಾವುದೇ ಪ್ರಕರಣಗಳಿಲ್ಲದಿದ್ದರೂ ಗಡಿಪಾರು ಮಾಡಲಾಗಿತ್ತು. ಬಳಿಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ ಎಂದು ಹೇಳಿದರು.
ನಗರದ ರಸ್ತೆ ಸಮಸ್ಯೆ, ಬ್ರಿಮ್ಸ್ ಆಸ್ಪತ್ರೆ ಹಾಗೂ ತಳ್ಳುಬಂಡಿ ವ್ಯಾಪಾರಿಗಳ ಪರ ಹೋರಾಟ ನಡೆಸಿದ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ ಅವರಿಗೆ ರೌಡಿಶೀಟರ್ ನೋಟಿಸ್ ನೀಡಿರುವುದನ್ನು ಖಂಡಿಸಿದ ಅವರು, ಇಂತಹ ಕ್ರಮಗಳು ಮುಂದುವರಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬೀದರ್ ಮಹಾನಗರ ಪಾಲಿಕೆ ಸದಸ್ಯ ಶಶಿ ಹೊಸಳ್ಳಿ, ಪಕ್ಷದ ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಬಾಬುವಾಲಿ, ಪೀರಪ್ಪ ಔರಾದೆ, ರಾಜಶೇಖರ್ ನಾಗಮೂರ್ತಿ, ಬಾಬುರಾವ್ ಕಾರಬಾರಿ, ಬಸವರಾಜ್ ಪವಾರ್ ಹಾಗೂ ಶ್ರೀನಿವಾಸ್ ಚೌದ್ರಿ ಇದ್ದರು.






