Bidar | ಜೂ. 5 ರಂದು ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಅಂತರರಾಷ್ಟ್ರೀಯ ಪರಿಸರ ದಿನಾಚರಣೆ

ಬೀದರ್ : ಜೂ.5 ರಂದು ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಅಂತರರಾಷ್ಟ್ರೀಯ ಪರಿಸರ ದಿನ ಆಚರಿಸಲು ನಿರ್ಧಾರಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ನ ನಗರಾಧ್ಯಕ್ಷ ಮುಹಮ್ಮದ್ ಮೌಅಜಮ್ ಅವರು ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸರ ದಿನಾಚರಣೆಯ ಅಂಗವಾಗಿ ಹಸಿರು ಗಿಡಗಳನ್ನು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ. 4 ರಂದು ಬೀದರ್ ಮಹಾನಗರ ಪಾಲಿಕೆಯ ಆಯುಕ್ತರಾದ ಮುಕುಲ್ ಜೈನ್ ಅವರನ್ನು ಭೇಟಿಯಾಗಿ ಬೀದರ್ ನಗರವನ್ನು ಸ್ವಚ್ಛವಾಗಡಲು ಕಸ ಗುಂಡಿಗಳು ಇರದ ಹಾಗೆ ನೋಡಿಕೊಳ್ಳಲು ಮತ್ತು ಪ್ಲಾಸ್ಟಿಕ್ ಮುಕ್ತ ನಗರವನ್ನು ನಿರ್ಮಾಣ ಮಾಡಲು ಮನವಿ ಪತ್ರ ಸಲ್ಲಿಸಿ ವಿನಂತಿಸಲಾಗುವುದು ಎಂದರು.
ಜೂ. 5 ರಂದು ಶಾಹಿನ್ ಕ್ಯಾಂಪಸ್ ನಲ್ಲಿ ಪರಿಸರ ಸಂರಕ್ಷಣೆ ಮತ್ತು ಇಸ್ಲಾಂಮಿನ ಭೋದನೆಗಳು ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ನಂತರದಲ್ಲಿ ಐತಿಹಾಸಿಕ ಬೀದರ್ ಕೋಟೆಯಿಂದ ಫತೆ ದರ್ವಾಜಾ ವರೆಗೆ ಹಾಗೂ ಚೌಬಾರಾದಿಂದ ನಯಿ ಕಮಾನ್ ವರೆಗೆ ಸಸಿ ನೆಡುವ ಕಾರ್ಯಕ್ರಮ ನಡೆಸಲಾಗುವುದು. ಹಾಗೆಯೇ ಶುಕ್ರವಾರದ ಪ್ರವಚನಗಳ ಮೂಲಕ ನಿಸರ್ಗ ಸಂರಕ್ಷಣೆ ಕುರಿತು ತಿಳುವಳಿಕೆ ಹೇಳಲಾಗುವುದು ಎಂದು ಅವರು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ನ ರಾಜ್ಯ ಸಲಹಾ ಮಂಡಳಿಯ ಸದಸ್ಯ ಮುಹಮ್ಮದ್ ಆಸಿಫೋದ್ದೀನ್ ಅವರು ಮಾತನಾಡಿ, ಬೀದರ್ ನಗರವನ್ನು ಸ್ವಚ್ಛವಾಗಿಡಲು ನಾವು ನಿರ್ಧಾರ ಮಾಡಿದ್ದೇವೆ. ಅದಕ್ಕಾಗಿ ನಾವು ಗಿಡಗಳನ್ನು ನೆಡುವುದು, ನಗರವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲು ತೀರ್ಮಾನ ಮಾಡಿದ್ದೇವೆ. ಹಾಗಾಗಿ ಸರ್ಕಾರ ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ನ ಮಾಧ್ಯಮ ವಿಭಾಗದ ಸಹಾಯಕ ಸಂಚಾಲಕ ಮುಹಮ್ಮದ್ ನಿಜಾಮುದ್ದಿನ್ ಅವರು ಮಾತನಾಡಿ, ಜೂ. 7 ರ ಬೆಳಿಗ್ಗೆ 11 ಗಂಟೆಗೆ ಈ ಕಾರ್ಯಕ್ರಮದ ಕುರಿತು ನಗರದ ಇಬ್ರಾಹಿಂ ಮಸೀದಿಯಲ್ಲಿ ಸಾರ್ವಜನಿಕ ಸಭೆ ನಡೆಸಲಾಗುದು. ಹಾಗೆಯೇ ಪರಿಸರ ಸಂರಕ್ಷಣೆ ಕುರಿತು ಮಹಿಳೆಯರಿಗಾಗಿ ಪ್ರತ್ಯೇಕ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಜೂ. 8 ಮತ್ತು 9 ರಂದು ನಗರದಲ್ಲಿ ಮೊಹಲ್ಲಾ ಸಭೆಗಳು ನಡೆಸಿ ಗಿಡ ಮರಗಳ ಸಂರಕ್ಷಣೆ ಮಾಡಲು ಮತ್ತು ನಗರವನ್ನು ಸ್ವಚ್ಛವಾಗಿಡಲು ತಿಳುವಳಿಕೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ, ಜಿಲ್ಲಾ ಸಂಚಾಲಕಿ ರೀಜ್ವಾನಾ ಬೇಗಂ ಸೇರಿದಂತೆ ಇತರರು ಉಪಸ್ಥಿತರಿದ್ದರು.






