ಬೀದರ್ ವಿವಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅವ್ಯವಹಾರ ಆರೋಪ: ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ

ಬೀದರ್: ನಗರದ ಹಾಲಹಳ್ಳಿ ಗ್ರಾಮದ ಬಳಿಯಿರುವ ಬೀದರ್ ವಿಶ್ವವಿದ್ಯಾಲಯದ 2025–26ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಯುಜಿಸಿ (UGC) ನಿಯಮಾವಳಿಗಳನ್ನು ಗಾಳಿಗೆ ತೂರಿ ದೊಡ್ಡ ಮಟ್ಟದ ಅವ್ಯವಹಾರ ನಡೆಸಲಾಗಿದೆ ಎಂದು ಭಾರತೀಯ ವಿದ್ಯಾರ್ಥಿ ಸಂಘದ (SFI) ಜಿಲ್ಲಾಧ್ಯಕ್ಷ ಪ್ರದೀಪ್ ನಾಟೇಕರ್ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ (DVP) ಜಿಲ್ಲಾಧ್ಯಕ್ಷ ಸಂದೀಪ್ ಕಾಂಟೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಶ್ವವಿದ್ಯಾಲಯದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ.
ಕೆಲವು ವಿಭಾಗಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಯುಜಿಸಿ ನಿಯಮದಂತೆ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ಪಟ್ಟಿ ಅಥವಾ ಅಂತಿಮ ಆಯ್ಕೆ ಪಟ್ಟಿಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ ಅಥವಾ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿಲ್ಲ. ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ತಮಗೆ ಬೇಕಾದವರನ್ನು ಮನಬಂದಂತೆ ಆಯ್ಕೆ ಮಾಡಲಾಗಿದೆ. ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿಟ್ಟಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಆಯ್ಕೆ ಹಾಗೂ ಬೋಧಕೇತರ ನೇಮಕಾತಿಯಲ್ಲಿ ನಡೆದಿರುವ ಅನ್ಯಾಯದ ಕುರಿತು ಈಗಾಗಲೇ ಕುಲಪತಿ ಹಾಗೂ ಕುಲಸಚಿವರಿಗೆ ಎರಡು ಬಾರಿ ಲಿಖಿತವಾಗಿ ಮತ್ತು ಮೂರು ಬಾರಿ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯವು ತಕ್ಷಣವೇ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ಅಂಕಪಟ್ಟಿಯ ವಿವರ ಹಾಗೂ ಆಯ್ಕೆ ಪಟ್ಟಿಯನ್ನು ಬಹಿರಂಗಪಡಿಸಬೇಕು. ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕು. ಒಂದು ವಾರದೊಳಗೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿಶ್ವವಿದ್ಯಾಲಯದ ಆವರಣದ ಮುಂದೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.







