Bidar | ಯುವಪೀಳಿಗೆಗೆ ಸಂಸ್ಕೃತಿ ಪರಿಚಯಿಸುವುದು ಅಗತ್ಯ: ರಘುನಾಥರಾವ್ ಮಲ್ಕಾಪೂರೆ

ಬೀದರ್: ಆಧುನಿಕ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರು ತಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ. ಇಂದಿನ ಯುವಪೀಳಿಗೆಗೆ ತಲೆತಲಾಂತರಗಳಿಂದ ಬಂದಿರುವ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪೂರೆ ಹೇಳಿದರು.
ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗೊಂಡ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅತ್ಯಂತ ಮುಖ್ಯ. ಅವರ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸುವುದು ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರಾವ್ ಮಲ್ಕಾಪೂರೆ ಮಾತನಾಡಿ, ಸಮಾಜದ ಮಕ್ಕಳು ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ ಮತ್ತು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದಾಗ ಅದು ಕೇವಲ ವೈಯಕ್ತಿಕ ಯಶಸ್ಸಾಗದೇ, ಕುಟುಂಬ ಹಾಗೂ ಸಮಾಜಕ್ಕೂ ಕೀರ್ತಿ ತಂದುಕೊಡುತ್ತದೆ ಎಂದರು.
ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿ ನಿರಂತರ ಪ್ರಯತ್ನದ ಮೂಲಕ ಉನ್ನತ ಸ್ಥಾನವನ್ನು ಗಳಿಸಬೇಕು ಎಂದು ಅವರು ಸಲಹೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಪ್ರಕಾಶ್ ಎಸ್. ದೇಶಮುಖ, ಮಕ್ಕಳನ್ನು ಮೈಗಳ್ಳರನ್ನಾಗಿ ಬೆಳೆಸದೆ ಪರಿಶ್ರಮಜೀವಿಗಳಾಗಿ ರೂಪಿಸುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲಿದೆ. ಪ್ರತಿಯೊಬ್ಬರೂ ಅಹಂಕಾರ ಬಿಟ್ಟು ವಿನಯ, ಪ್ರೀತಿ ಮತ್ತು ಮಾನವೀಯತೆಯಿಂದ ಬದುಕಬೇಕು ಎಂದು ಹೇಳಿದರು.
ಮಕ್ಕಳು ತಮ್ಮ ಗುರಿಯತ್ತ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಮುನ್ನಡೆಯಬೇಕು. ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂಬುದನ್ನು ಅರಿತು, ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ್ ಜೋಳದಾಪಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ಚೀದ್ರಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ. ಸಂಜೀವಕುಮಾರ್ ಅತಿವಾಳೆ, ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ಮಹಾನಗರ ಪಾಲಿಕೆಯ ಸದಸ್ಯ ಹನಮಂತ್ ಮಲ್ಕಾಪುರ್, ವೈದ್ಯ ಬಾಬುರಾವ್ ಮರಖಲ್, ಡಾ. ಶ್ರೀಕಾಂತ್ ಚಿಂಚೋಳಿಕರ್, ಡಾ. ಜಿ.ಬಿ ಮಲ್ಲಿಕಾರ್ಜುನ್, ಪೀರಪ್ಪಾ ಯರನಳ್ಳಿ, ರತಿಕಾಂತ್ ಜೋಜನಾ, ಶಂಭುಲಿಂಗ್ ವಾಲ್ದೊಡ್ಡಿ, ದೇವಪ್ಪಾ ಚಾಂಬೋಳೆ, ಬಾಬುರಾವ್ ಮಲ್ಕಾಪುರ್, ತುಕಾರಾಮ್ ಚಿದ್ರಿ, ಶಿವಕುಮಾರ್ ಉಪ್ಪೆ, ದೀಪಕ್ ಚೀದ್ರಿ, ತುಕಾರಾಮ್ ಔದತಪುರ್, ಬಾಲಾಜಿ ಜಬಾಡೆ, ಕಲ್ಲಪ್ಪಾ ರಾಯಗೊಂಡ್, ಸುನೀಲ್ ಚಿಲ್ಲರ್ಗಿ, ಗೊವಿಂದ್ ದುರ್ಗೆ, ಶರಣಪ್ಪಾ ಮಲಗೊಂಡ್ ಹಾಗೂ ಪ್ರವೀಣ್ ಸೇರಿದಂತೆ ಇತರರು ಇದ್ದರು. ವಿಜಯಕುಮಾರ್ ಬ್ಯಾಲಹಳ್ಳಿ ಸ್ವಾಗತಿಸಿದರು. ದೇವಿದಾಸ್ ಜೋಶಿ ನಿರೂಪಿಸಿದರು. ಮಲ್ಲಿಕಾರ್ಜುನ್ ಮುರ್ಕೆ ವಂದಿಸಿದರು.






