Bidar | ಯುವಜನರ ರಾಜಕಾರಣದ ದಿಕ್ಕು, ಭವಿಷ್ಯದ ಚರ್ಚೆಗೆ ‘ಜನನುಡಿ-2026’: ಪೋಸ್ಟರ್ ಬಿಡುಗಡೆ

ಬೀದರ್: ಯುವಜನರ ರಾಜಕಾರಣದ ದಿಕ್ಕು, ಭವಿಷ್ಯ ಮತ್ತು ಸವಾಲುಗಳನ್ನು ಪ್ರಧಾನ ಆಶಯವಾಗಿಟ್ಟುಕೊಂಡು ನ. 28 ಮತ್ತು 29ರಂದು ಮಂಗಳೂರಿನ ಬಲ್ಮಠದ ಕೆಟಿಸಿ ಕ್ಯಾಂಪಸ್‌ನಲ್ಲಿ ನಡೆಯಲಿರುವ ‘ಜನನುಡಿ-2026’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಆವರಣದಲ್ಲಿ ಪ್ರಗತಿಪರ ಸಂಘಟನೆಗಳ ಪ್ರಮುಖರು ಪೋಸ್ಟರ್ ಬಿಡುಗಡೆಗೊಳಿಸಿದರು.
ಇಂದಿನ ಕಾಲಘಟ್ಟದಲ್ಲಿ ಯುವಜನರು ಕೇವಲ ಪ್ರೇಕ್ಷಕರಾಗಿ ಉಳಿಯಬೇಕೇ ಅಥವಾ ದೇಶದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ದಿಕ್ಕನ್ನು ನಿರ್ಧರಿಸುವ ಸಕ್ರಿಯ ಶಕ್ತಿಗಳಾಗಬೇಕೇ ಎಂಬ ಮಹತ್ವದ ಪ್ರಶ್ನೆಯನ್ನು ‘ಜನನುಡಿ’ ಮುನ್ನೆಲೆಗೆ ತರಲಿದೆ. ಯುವಜನರ ಉದ್ಯೋಗ, ಶಿಕ್ಷಣ, ಬದುಕು, ಘನತೆ, ಹಕ್ಕುಗಳು ಮತ್ತು ರಾಜಕೀಯ ಭಾಗವಹಿಸುವಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಸಮಕಾಲೀನ ಭಾರತದ ಸವಾಲುಗಳ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಹಾಗೂ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಲಾಯಿತು.
ನ. 28ರಂದು ಬೆಳಿಗ್ಗೆ 9 ಗಂಟೆಗೆ ಪುಸ್ತಕ ಮೇಳದ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಹೋರಾಟಗಾರ ಬಸವರಾಜ್ ಸೂಳಿಭಾವಿ ಪುಸ್ತಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಜನನುಡಿ ಉದ್ಘಾಟನಾ ಗೋಷ್ಠಿಯನ್ನು ಸಂಸ್ಕೃತಿ ಚಿಂತಕ ಪ್ರೊ. ರಹಮತ್ ತರೀಕೆರೆ ಉದ್ಘಾಟಿಸಲಿದ್ದಾರೆ.
ಎರಡು ದಿನಗಳ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಸಂವಾದ, ವಿದ್ಯಾರ್ಥಿ ಚಳವಳಿ, ಯುವಜನರ ರಾಜಕಾರಣದ ದಿಕ್ಕು ಮತ್ತು ಭವಿಷ್ಯ ಹಾಗೂ ಸಮಕಾಲೀನ ಭಾರತದ ಸವಾಲುಗಳ ಕುರಿತು ವಿವಿಧ ಗೋಷ್ಠಿಗಳು ಮತ್ತು ಚರ್ಚೆಗಳು ನಡೆಯಲಿವೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕಾಂತ್ ಸ್ವಾಮಿ, ಅಮೃತರಾವ್ ಚಿಮಕೋಡೆ, ಶಿವಶರಣಪ್ಪ ಹುಗ್ಗೆ ಪಾಟೀಲ್, ಗುರುದೇವ್, ಶಂಕರರಾವ್ ದೊಡ್ಡಿ, ಜಗದೀಶ್ವರ್ ಬಿರಾದಾರ್, ವಿನಯಕುಮಾರ್ ಮಾಳಗೆ, ಮಹೇಶ್ ಗೋರನಾಳಕರ್, ಸುಧಾಮಣಿ, ಅರ್ಚನಾ, ಪ್ರಕಾಶ್ ರಾವಣ, ಸಂತೋಷ್ ಜೋಳದಾಬಕೆ ಸೇರಿದಂತೆ ಪ್ರಗತಿಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.






