Bidar | ಶಿವನಗರ ವಾಕಿಂಗ್ ಟ್ರ್ಯಾಕ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ

ಬೀದರ್ : ನಗರದ ಶಿವನಗರ ಪ್ರದೇಶದಲ್ಲಿರುವ ಸಾರ್ವಜನಿಕರ ವಾಕಿಂಗ್ ಸ್ಥಳದ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿದರು.
ನಗರದಲ್ಲಿ ಮಂಗಳವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಶಿವನಗರ ಬಡಾವಣೆ ಜೊತೆಗೆ ಗುರುನಾನಕ್ ಕಾಲೋನಿ, ಗುರು ನಗರ ಕಾಲೋನಿ, ವೈಷ್ಣವಿ ಕಾಲೋನಿ, ಭವಾನಿ ಕಾಲೋನಿ ಸೇರಿದಂತೆ ಹಲವು ಬಡಾವಣೆಯ ಸಾರ್ವಜನಿಕರು ವಾಕಿಂಗ್ ಮಾಡಲು ಇದೇ ವಾಕಿಂಗ್ ಟ್ರ್ಯಾಕ್ ಗೆ ಬರುತ್ತಾರೆ. ವಾಕಿಂಗ್ ಟ್ರ್ಯಾಕ್ ಹಾಗೂ ರಸ್ತೆ-ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು ಕೆಲವು ತಿಂಗಳುಗಳ ಹಿಂದೆ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಸ್ಥಳೀಯ ನಿವಾಸಿ, ಹಿರಿಯ ನಾಗರಿಕರಿಕರಿಗೆ ದಿನನಿತ್ಯ ವಾಕಿಂಗ್ ಮಾಡಲು ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.
ಕಾಮಗಾರಿಯ ವಿಳಂಬ ಕುರಿತು ಈಗಾಗಲೇ ಜಿಲ್ಲಾಡಳಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ರಹಿಂ ಖಾನ್ ಅವರ ವೈಯಕ್ತಿಕ ಸಹಾಯಕರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಗಮನ ಹರಿಸಲಾಗುತ್ತಿದೆ ಎಂದು ಭರವಸೆ ಕೂಡ ನೀಡಿದ್ದರು. ಆದರೆ ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಲಾಗಿದೆ.
ಗಣೇಶ್, ಭಾಗ್ಯವಂತಿ ದೇವಸ್ಥಾನದ ಪಕ್ಕದ ರಸ್ತೆ, ಬಸ್ ನಿಲ್ದಾಣದಿಂದ ಹೆಣ್ಣು ಮಗು ವೃತ್ತದವರೆಗೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಶೀಘ್ರ ಪೂರ್ಣಗೊಳಿಸಬೇಕು. ಜೊತೆಗೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಚನ್ನಬಸವಂತ್ ರೆಡ್ಡಿ, ಅಶೋಕಕುಮಾರ್ ಕರಂಜಿ, ಬಂಡೆಪ್ಪಾ ಕೋಟೆ, ಗಣೇಶ್ ಭೋಸ್ಲೆ, ನೀಲಕಂಠ್ ಉಳಾಗಡ್ಡಿ, ಶ್ರೀಕಾಂತ್ ಮೋದಿ, ಪ್ರಭುಶೇಟ್ಟಿ ಮುಲ್ಗೆ, ಸಂಜು ಪಾಟೀಲ್, ನಾಗರಾಜ್ ಕರ್ಪೋರ್, ರಮೇಶ್ ಬೀರಾದರ್, ಶೇಣ್ಮುಖ ಬೀರಾದರ್, ವಿಶ್ವನಾಥ್ ಹಾಗೂ ಅಶೋಕ್ ರೆಡ್ಡಿ ಸೇರಿದಂತೆ ಬಡಾವಣೆಯ ಇತರ ನಿವಾಸಿಗಳು ಉಪಸ್ಥಿತರಿದ್ದರು.






