Bidar | ಕಲ್ಯಾಣ ಕರ್ನಾಟಕ ವಿಮೋಚನಾ ದಿನ: ಹಳ್ಳಿಖೇಡದಲ್ಲಿ ಬೃಹತ್ ತಿರಂಗಾ ಯಾತ್ರೆ
ನೂರಾರು ಅಡಿ ಉದ್ದದ ರಾಷ್ಟ್ರಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ

ಬೀದರ್: ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಬಸವತೀರ್ಥ ವಿದ್ಯಾಪೀಠ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣ ಭಾರತಿ ಬೀದರ್ ಜಿಲ್ಲಾ ಘಟಕದ ಸಹಯೋಗದಲ್ಲಿ ಹಳ್ಳಿಖೇಡ ಗ್ರಾಮದಲ್ಲಿ ಗುರುವಾರ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು.
1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ಹೈದರಾಬಾದ್ ನಿಜಾಮರ ಆಡಳಿತದಿಂದ ಕಲ್ಯಾಣ ಕರ್ನಾಟಕ ಭಾಗವು 1948ರ ಸೆ.17ರಂದು ವಿಮೋಚನೆಗೊಂಡ ಐತಿಹಾಸಿಕ ದಿನವನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಯಾತ್ರೆ ಆಯೋಜಿಸಲಾಗಿತ್ತು.
ಹಳ್ಳಿಖೇಡದ ಪ್ರಮುಖ ರಸ್ತೆಗಳಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ವಿದ್ಯಾರ್ಥಿಗಳು ನೂರಾರು ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹೊತ್ತು ಸಾಗಿದರು. ಭಾರತ ಮಾತಾ ಕೀ ಜೈ, ವಂದೇ ಮಾತರಂ ಸೇರಿದಂತೆ ವಿಮೋಚನಾ ಹೋರಾಟದ ಹುತಾತ್ಮರ ಜಯಘೋಷಗಳು ಮೊಳಗಿದವು.
ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಜಿಲ್ಲಾ ಸಂಚಾಲಕ ಈಶ್ವರ್ ರುಮ್ಮಾ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕವೂ ಹೈದರಾಬಾದ್ ನಿಜಾಮರು ಮತ್ತು ರಜಾಕಾರರ ದಬ್ಬಾಳಿಕೆಗೆ ಕಲ್ಯಾಣ ಕರ್ನಾಟಕ ಒಳಗಾಗಿತ್ತು. ಈ ಭಾಗದ ವಿಮೋಚನೆಗಾಗಿ ಸ್ವಾಮಿ ರಾಮಾನಂದ ತೀರ್ಥ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಸಾವಿರಾರು ದೇಶಭಕ್ತರು ಹೋರಾಡಿ ಬಲಿದಾನಗೈದಿದ್ದಾರೆ ಎಂದು ಸ್ಮರಿಸಿದರು.
ವಿಮೋಚನಾ ಹೋರಾಟದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯವಾಗಿದ್ದು, ನಾಡಿನ ಏಕತೆ ಹಾಗೂ ಪ್ರಗತಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಶಿಕ್ಷಣ ಭಾರತಿ ಜಿಲ್ಲಾ ಸಂಯೋಜಕ ಶಿವಶರಣು ಚಾಂಬೋಳೆ, ಕೇಶವರಾವ್ ತಳಘಟಕರ್, ಸೋಮಯ್ಯ ಸ್ವಾಮಿ ಹಿರೇಮಠ್, ರಮೇಶ್ ಮಹೇಂದ್ರಕರ್, ಗುಂಡಯ್ಯ ಎಸ್. ತೀರ್ಥ, ಪ್ರಭುರಾವ್ ದುರ್ಗಾ, ಮಸ್ತಾನ್ ಪಟೇಲ್, ಚಂದ್ರಕಾಂತ್ ಬಿರಾದಾರ್, ಬಸವರಾಜ್ ದುಬಲಗುಂಡಿಕರ್, ಬಸವತೀರ್ಥ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಮುಖ್ಯಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






