ಬೀದರ್ | ಕನೇರಿ ಸ್ವಾಮಿ ಬಸವತತ್ವದ ವಿರುದ್ಧ ನೀಡಿದ ಹೇಳಿಕೆ ವಿಷಾದನೀಯ : ಲಿಂಗಾಯತ ಮಠಾಧಿಪತಿಗಳ ಒಕ್ಕೂಟ
ಬೀದರ್ : ಕೊಲ್ಲಾಪುರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತ ವಿರೋಧಿ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಪ್ರಕಟಣೆ ಮೂಲಕ ತಿಳಿಸಿದೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.1ರಿಂದ ಅ.5ರವರೆಗೆ ಕರ್ನಾಟಕ ರಾಜ್ಯಾದ್ಯಂತ ಮಾಡಿರುವ ಬಸವ ಸಂಸ್ಕೃತಿ ಅಭಿಯಾನವು ಯಶಸ್ವಿಯಾಗಿರುವುದರಿಂದ ಬಸವತತ್ವ ವಿರೋಧಿ ಬಣಗಳಲ್ಲಿ ಆತಂಕ ನಿರಾಶೆ, ಭಯ ಹುಟ್ಟಿಸಿದೆ. ಕನೇರಿ ಮಠದ ಸ್ವಾಮಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಬೀಳೂರು ಗ್ರಾಮದ ಬಸವಾದಿ ಶರಣ ಪರಂಪರೆಯ ವಿರಕ್ತಮಠದ ಒಂದು ಕಾರ್ಯಕ್ರಮದಲ್ಲಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟನ್ನು ಮುಖ್ಯಮಂತ್ರಿ ಕೃಪಾಪೋಷಿತ ನಾಟಕ ತಂಡ ಎಂದು ಹೇಳಿಕೆ ನೀಡಿದ್ದಾರೆ. ಬಸವತತ್ವದ ವಿರುದ್ಧ ನೀಡಿದ ಹೇಳಿಕೆ ವಿಷಾದನೀಯ ಸಂಗತಿಯಾಗಿದೆ. ಅವರು ದ್ವೇಷದ ಹಾಗೂ ಹಸಿ ಸುಳ್ಳು ಮಾತುಗಳಾಡುತ್ತಿದ್ದಾರೆ. ಅವುಗಳನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಲಾಗಿದೆ.
ಬಸವ ಸಂಸ್ಕೃತಿ ಅಭಿಯಾನವು ಸಾಮಾಜಿಕ ಸಮಾನತೆ, ಸಹೋದರತ್ವ, ಮಾನವೀಯತೆ, ಪ್ರಜಾಪ್ರಭುತ್ವ ಮುಂತಾದ ಮೌಲ್ಯವನ್ನು ಬಿತ್ತಿದೆ. ಇದರಿಂದ ರಾಷ್ಟ್ರಧರ್ಮ ಬಲಿಷ್ಠವಾಗುತ್ತದೆಯೇ ವಿನಃ ನಾಶವಾಗುವುದಿಲ್ಲ ಎಂಬುದು ಅದೃಶ್ಯ ಸ್ವಾಮಿಗಳು ಅರ್ಥೈಸಿಕೊಳ್ಳಬೇಕು. ಪೂಜ್ಯರಿಗೆ ಲಿಂಗಾಯತ ಮಠಗಳ ಕುರಿತು ಮಾತನಾಡುವ ಯಾವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಯಾವ ಪೂಜ್ಯರು ಕೂಡ ಅನ್ಯ ಧರ್ಮದ ಆಚರಣೆಗಳ ಕುರಿತು ಮಾತನಾಡಿಲ್ಲ. ಆದರೂ ಕನೇರಿಯ ಶ್ರೀಗಳು ಲಿಂಗಾಯತ ಮಠಾಧಿಪತಿಗಳ ಕುರಿತು ಅತ್ಯಂತ ಹಸಿ ಸುಳ್ಳು ಆಪಾದನೆ ಮಾಡಿರುವುದು ಅವರ ಸನ್ಯಾಸ ಧರ್ಮಕ್ಕೆ ಚ್ಯುತಿ ತಂದಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತಿಳಿಸಿದೆ.







