Bidar | SLAO ಅಧಿಕಾರಿಯನ್ನು ನೇಮಕ ಮಾಡಲು ಕಾರಂಜಾ ಸಂತ್ರಸ್ತರು ಮನವಿ

ಬೀದರ್ : ಜಿಲ್ಲೆಯಲ್ಲಿ ಖಾಲಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿ (SLAO) ಹುದ್ದೆಗೆ ತಕ್ಷಣ ಹಿರಿಯ ಹಾಗೂ ಸಮರ್ಥ ಅಧಿಕಾರಿಯನ್ನು ನೇಮಕ ಮಾಡಬೇಕು. ಜೊತೆಗೆ SLAO ಕಚೇರಿಯನ್ನು ಬೀದರ್ ನಗರದಲ್ಲೇ ಸ್ಥಾಪಿಸಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಕಳೆದ ಹಲವು ತಿಂಗಳುಗಳಿಂದ SLAO ಹುದ್ದೆ ಖಾಲಿ ಇರುವುದರಿಂದ ಜಿಲ್ಲೆಯ ನೂರಾರು ರೈತರು ಮತ್ತು ಭೂಸ್ವಾಧೀನ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಲಾಗಿದೆ.
ಭೂಸ್ವಾಧೀನ ಪರಿಹಾರ, ಪ್ರಕರಣಗಳ ವಿಚಾರಣೆ, ದಾಖಲೆಗಳ ಪರಿಶೀಲನೆ ಹಾಗೂ ಪರಿಹಾರ ವಿತರಣೆಯಂತಹ ಹಲವು ಕೆಲಸಗಳು ಸ್ಥಗಿತಗೊಂಡಿದ್ದು, ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Kಕಾರಂಜಾ ಜಲಾಶಯ ಯೋಜನೆಗಾಗಿ ಭೂಮಿ ನೀಡಿರುವ ರೈತರಿಗೆ ಬಾಕಿ ಇರುವ ಪರಿಹಾರ ಹಾಗೂ ಇತರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಈಗಾಗಲೇ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ರೈತರು ಆಗ್ರಹಿಸಿದ್ದರು.
ಆದರೆ, ಸಮಿತಿಯಲ್ಲಿ SLAO ಅವರ ಪಾತ್ರ ಪ್ರಮುಖವಾಗಿದ್ದು, ಹುದ್ದೆ ಖಾಲಿ ಇರುವುದರಿಂದ ಸಮಸ್ಯೆಗಳ ಪರಿಹಾರ ವಿಳಂಬವಾಗುತ್ತಿದೆ ಎಂದು ಆರೋಪಿಸಲಾಗಿದೆ.
ಖಾಲಿ ಇರುವ SLAO ಹುದ್ದೆಗೆ ತಕ್ಷಣ ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕು. ಕಚೇರಿ ಕಾರ್ಯನಿರ್ವಹಣೆಗೆ ಕನಿಷ್ಠ ಇಬ್ಬರು ಸಹಾಯಕ ಅಧಿಕಾರಿಗಳನ್ನು ನಿಯೋಜಿಸಬೇಕು. ಪ್ರಸ್ತುತ ರೇಷ್ಮೆ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ SLAO ಕಚೇರಿಯನ್ನು ಬೀದರ್ ನಗರದಲ್ಲಿಯೇ ಪ್ರತ್ಯೇಕ ಕಚೇರಿಯಾಗಿ ಸ್ಥಾಪಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಇನ್ನೂ ಐದು ದಿನಗಳೊಳಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಕಾರಂಜಾ ಮುಳುಗಡೆ ಸಂತ್ರಸ್ತ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೊಚಕನಳ್ಳಿ, ರಾಜಪ್ಪ ಕೋಸ್ಂ, ರಾಜಶೇಖರ್ ಖೇಣಿ ರಂಜೋಳ್, ವಿನಯ್ ಮಾಳಗೆ, ಮಹೇಶ್, ಮಾದಪ್ಪ ಸಂಗೋಳಗಿ, ಲಕ್ಷ್ಮಿ ಮಾದಪ್ಪ ಹಾಗೂ ನಾಗಶೆಟ್ಟಿ ಹಚ್ಚೆ ಸೇರಿದಂತೆ ಇತರ ಸಂತ್ರಸ್ತ ರೈತರು ಉಪಸ್ಥಿತರಿದ್ದರು.






