Bidar | ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಕರವೇ ಆಗ್ರಹ

ಬೀದರ್: ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿರುವುದರಿಂದ ಸಾಮಾನ್ಯ ಜನರು, ಕೂಲಿ ಕಾರ್ಮಿಕರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕ ಆಗ್ರಹಿಸಿದೆ.
ನಗರದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಸೇರಿದಂತೆ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಜನರು ಪರದಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಳೆ ಪ್ರಮಾಣ ಕಡಿಮೆಯಾಗಿ ಬರ ಪರಿಸ್ಥಿತಿ ಉಂಟಾಗಿರುವುದರಿಂದ ರೈತರು ಹಾಗೂ ಗ್ರಾಮೀಣ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೊರಿಸಿದಂತಾಗಿದೆ. ದರ ಏರಿಕೆಯಿಂದ ಕೂಲಿ ಕಾರ್ಮಿಕರು, ರೈತರು, ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಯಾಣಿಸಲು ಹೆಚ್ಚಿನ ಹಣ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜನರ ಸಂಕಷ್ಟವನ್ನು ಪರಿಗಣಿಸಿ ಸರ್ಕಾರ ಕೂಡಲೇ ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ 15 ದಿನಗಳೊಳಗೆ ದರ ಏರಿಕೆಯನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಸಂಚಾಲಕ ಬಸವರಾಜ್ ನಂದಗಾಂವ್, ರೈತ ಘಟಕದ ಅಧ್ಯಕ್ಷ ವೀರಶೆಟ್ಟಿ ಗೊಸಪುರ್, ರೈತ ಘಟಕದ ಮುಖಂಡ ಧನರಾಜ್ ಗೊಸಪುರ್, ಜಿಲ್ಲಾ ಕಾರ್ಯದರ್ಶಿ ಮೊಜೆಸ್ ಆಣದೂರ್, ಜಿಲ್ಲಾ ಸಹಕಾರ್ಯದರ್ಶಿಗಳಾದ ಮೈಕಲ್ ಕಡ್ಯಾಳ್ ಹಾಗೂ ಅಶೋಕ್ ಕಡ್ಯಾಳ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೋರ್, ಯುವ ಘಟಕದ ಅಧ್ಯಕ್ಷ ಚಂದ್ರಕಾಂತ್ ಪೊಳ್, ನಿಲೇಶ್ ರಾಠೋಡ, ಧನರಾಜ್ ಚಿಟ್ಟಾವಾಡಿ, ಶಿವಕುಮಾರ್ ಮಾಮುಡಗಿ, ಸಹ ಕಾರ್ಯದರ್ಶಿ ರಾಜಗೊಂಡ್ ಆಣದೂರೆ, ಅಭಿಷೇಕ್ ಕಮಠಾಣಾ, ಆಕಾಶ್ ಕಡ್ಯಾಳ್ ಹಾಗೂ ಶಾದ್ರಾಕ್ ನೆಳ್ಗಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.






