ಬೀದರ್: ರೈತರ ಸಾಲಮನ್ನಾ, ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಕಿಸಾನ್ ಸಭಾ ಒತ್ತಾಯ
ಬರಗಾಲ, ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ: ರೈತರ ಹೋರಾಟಕ್ಕೆ ಯುವಜನರು ಕೈಜೋಡಿಸಲು ಕರೆ

ಬೀದರ್ : ಬರಗಾಲದ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಬೇಕು. ನೀರಿನ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವುದರ ಜತೆಗೆ ರೈತರ ಹೋರಾಟದಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾದ ಕರ್ನಾಟಕ ರಾಜ್ಯ ಕಾರ್ಯಕಾರಿ ಅಧ್ಯಕ್ಷ ಮೌಲಾಮುಲ್ಲಾ ಕರೆ ಅವರು ನೀಡಿದರು.
ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ನಜೀರ ಅಹ್ಮದ್ ಅವರ ಸಮ್ಮುಖದಲ್ಲಿ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಮಂಡಳಿಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಗೌರವಾಧ್ಯಕ್ಷ ವೀರಶೆಟ್ಟಿ ವಟಂಬೆ ಅವರು ಮಾತನಾಡಿ, ರೈತರ ಸಾಲ ಮನ್ನಾ ಮಾಡಬೇಕು. ಹಾಗೆಯೇ ವಿಬಿ-ಜಿ ರಾಮ್ ಜಿ ಕಾರ್ಯಕ್ರಮವನ್ನು ರೈತರ ಹಿತದೃಷ್ಟಿಯಿಂದ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಣಿಕ ಖಾನಾಪೂರ ಅವರು ಜಿ-ರಾಮ್-ಜಿ ಕಾರ್ಯಕ್ರಮ ಅನುಷ್ಠಾನದಲ್ಲಿನ ಅಡೆತಡೆಗಳ ಕುರಿತು ಮಾತನಾಡಿದರು. ಬಾಬುರಾವ ಹೊನ್ನಾ ಅವರು ರೈತರ ವಿವಿಧ ಸಮಸ್ಯೆಗಳ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು. ಅತಿಥಿಗಳಾದ ಶಿವರಾಜ್ ಪಾಟೀಲ್ ಅತಿವಾಳ್ ಹಾಗೂ ಶಿವರಾಯ ಮುದಾಳೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದರು. ಬಿಎಸ್ಎಸ್‌ಕೆ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆಯೂ ಪ್ರಸ್ತಾಪಿಸಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತರ ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ನಿರ್ಣಯ : ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ರೈತರ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಬೇಕೆಂಬ ಪ್ರಸ್ತಾವನೆಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ಸಭೆಯ ಆರಂಭದಲ್ಲಿ ರೈತರ ಪರ ಕಾಳಜಿ ಹೊಂದಿದ್ದ ದಿ. ನಾನಾ ಪಾಟೇಕರ್ ಅವರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಎರಡು ನಿಮಿಷಗಳ ಮೌನ ಆಚರಿಸಲಾಯಿತು.
ಈ ಸಭೆಯಲ್ಲಿ ಎಂ.ಡಿ. ಖಮರ್ ಪಟೇಲ್, ಪಾಂಡುರಂಗ್ ಪ್ಯಾಗೆ, ಪ್ರಭು ಹೊಚಕನಳ್ಳಿ, ಬಸವರಾಜ್ ಪಾಟೀಲ್, ಎಂ.ಡಿ. ಮೋಹಿನ್‌ಮಿಯ್ಯಾ, ರಾಜಕುಮಾರ್ ಬಗದಲ್‌ಕರ್, ಎಂ.ಡಿ. ಶಫಾಯತ್ ಅಲಿ, ಚಾಂದೋಬಾ ಭೋಸ್ಲೆ, ರಾಮಣ್ಣ, ನನ್ನೆಸಾಬ್, ಶಿವಕುಮಾರ್, ಪ್ರಜ್ವಲ್, ಪ್ರವೀಣ್, ಯೋಗೇಶ್ ಹಾಗೂ ಆದಿತ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಜೈಶೀಲ್ ಅವರು ವಂದಿಸಿದರು.






