ಬೀದರ್ | ಸಮಯ ಪಾಲನೆ ಮಾಡದ ಕಾರ್ಮಿಕ ಇಲಾಖೆಯ ಅಧಿಕಾರಿಗಳು : ಸಾರ್ವಜನಿಕರ ಆಕ್ರೋಶ

ಬಸವಕಲ್ಯಾಣ : ತಾಲೂಕಿನ ಕಾರ್ಮಿಕ ಇಲಾಖೆಯ ಕಚೇರಿಯ ಅಧಿಕಾರಿಗಳು ಹಾಗು ಸಿಬ್ಬಂದಿ ಸರ್ಕಾರದ ಆದೇಶದಂತೆ ಸಮಯ ಪಾಲನೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಬರಬಬೇಕು ಹಾಗೂ ಸಮಯಪಾಲನೆ ಮಾಡಬೇಕು ಎಂದು ಕೆಲ ದಿನಗಳ ಹಿಂದಷ್ಟೆ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರು. ಆದರೆ, ಇಲ್ಲಿನ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು 10 ಗಂಟೆ 15 ನಿಮಿಷವಾದರು ಕಚೇರಿಯ ಬಾಗಿಲು ಸಹ ತೆರೆದಿಲ್ಲ. 10 ಗಂಟೆಗೆ ಬರಬೇಕಾದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳ ಆದೇಶಕ್ಕೂ ಕಿಮ್ಮತ್ತು ನೀಡದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಯಾವಾಗ ಎನ್ನುವುದೇ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ. ಬೆಳಿಗ್ಗೆ 10ಗಂಟೆಗೆ ಕಚೇರಿಯ ಬಾಗಿಲು ತೆರೆದು ಸಾರ್ವಜನಿಕರ ಸೇವೆ ನೀಡಬೇಕಾದ ಅಧಿಕಾರಿಗಳು ಸಮಯ ಮೀರಿದರು ಕೂಡ ಕಚೇರಿಯ ಬಾಗಿಲು ತೆರೆದಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ ತೋರಿದ್ದಾರೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸದೆ ತಮಗೆ ಇಷ್ಟ ಬಂದತೆ ಕಚೇರಿಗೆ ಬರುತ್ತಿದ್ದು, ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಯ ಪಾಲನೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನೂಕುಲ ಮಾಡಿಕೊಡಬೇಕಾಗಿದೆ. ರಾಜ್ಯದ ಮುಖ್ಯಮಂತ್ರಿಗಳ ಆದೇಶ ಪಾಲಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಬಸವಕಲ್ಯಾಣದಲ್ಲಿ ಹಲವು ಇಲಾಖೆಯ ಅಧಿಕಾರಿಗಳು ಸಮಯ ಪಾಲನೆ ಮಾಡುತ್ತಿಲ್ಲ. ಮೇಲಾಧಿಕಾರಿಗಳು ಇತ್ತ ಗಮನಹರಿಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.






