Bidar | ಸಡಗರ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆಯಾಗಲಿ : ಡಿಸಿ ಶಿಲ್ಪಾ ಶರ್ಮಾ

ಬೀದರ್: ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿರುವ ಸಂದರ್ಭದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಬೀದರ್‌ನಲ್ಲಿ ತಿರಂಗಾ ಬೈಕ್ ರ‍್ಯಾಲಿ ಆಯೋಜಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಮುನ್ನ ದಿನ ಬೀದರ್ ಕೋಟೆಯಲ್ಲಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೈಕ್ ರ‍್ಯಾಲಿ ಸಾರ್ವಜನಿಕರಲ್ಲಿ ಹರ್ಷ, ಸಂಭ್ರಮ, ನವೋಲ್ಲಾಸ ಹಾಗೂ ಸ್ವಾಭಿಮಾನದ ಭಾವನೆ ಮೂಡಿಸಿದೆ. ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನವನ್ನು ಸಡಗರ, ಸಂಭ್ರಮ ಹಾಗೂ ಸ್ವಾಭಿಮಾನದಿಂದ ಆಚರಿಸಬೇಕು ಎಂದು ಕರೆ ನೀಡಿದರು.
ಬೀದರ್ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲ ಧರ್ಮದವರು ಶಾಂತಿ ಹಾಗೂ ಸೌಹಾರ್ದದಿಂದ ಬದುಕುತ್ತಿದ್ದಾರೆ. ಸ್ವಾತಂತ್ರ್ಯೋತ್ಸವವನ್ನು ಪ್ರತಿಯೊಬ್ಬರೂ ಉತ್ಸಾಹದಿಂದ ಆಚರಿಸಬೇಕು ಎಂದು ಹೇಳಿದರು.
ತಿರಂಗಾ ಧ್ವಜ ಹಿಡಿದು ನೂರಾರು ಸಾರ್ವಜನಿಕರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ದೇಶಭಕ್ತಿ ಘೋಷಣೆಗಳನ್ನು ಕೂಗಿದರು. ಬೀದರ್ ಕೋಟೆಯ ಮುಖ್ಯ ದ್ವಾರದಿಂದ ಆರಂಭಗೊಂಡ ರ‍್ಯಾಲಿ ಚೌಬಾರಾ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಗಾರ್ಡನ್ ಬರೀದ್ ಶಾಹಿ ಗಾರ್ಡನ್‌ನಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಸುರೇಖಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್ ಬಿರದಾರ್, ಇಓ ಕೀರಣ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚೆನ್ನಶೆಟ್ಟಿ, ಕರ್ನಾಟಕ ಜನಪದ ಸಾಹಿತ್ಯ ಪರಿಷತ್ತಿನ ಸದಸ್ಯ ವಿಜಯಕುಮಾರ್ ಸೋನಾರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.






