ಬೀದರ್ | ಛತ್ರಪತಿ ಶಿವಾಜಿ ಜಯಂತಿ ಅದ್ದೂರಿಯಾಗಿ ಆಚರಿಸೋಣ : ಶಿವಕುಮಾರ್ ಶೀಲವಂತ್

ಬೀದರ್ : ಪ್ರತಿ ವರ್ಷದಂತೆ ಈ ವರ್ಷವು ಕೂಡ ಫೆ.19 ರಂದು ನಡೆಯುವ ಛತ್ರಪತಿ ಶಿವಾಜಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್ ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಜಯಂತಿ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಅರೆ ಸರಕಾರಿ ಸಂಘ-ಸಂಸ್ಥೆಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ನಂತರ 10:30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು ಎಂದು ಹೇಳಿದರು.
ನಂತರ ಛತ್ರಪತಿ ಶಿವಾಜಿಯವರ ಭಾವಚಿತ್ರದ ಮೆರವಣಿಗೆ ಪ್ರಾರಂಭಗೊಳ್ಳುತ್ತದೆ. ಅದು ಶಿವಾಜಿ ವೃತ್ತ, ಹರಳಯ್ಯ ವೃತ್ತ, ಜನರಲ್ ಕರಿಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ಬಸವೇಶ್ವರ್ ವೃತ್ತ, ರೋಟರಿ ವೃತ್ತದ ಮೂಲಕ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರಕ್ಕೆ ತಲುಪುತ್ತದೆ. ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.
ನಗರಸಭೆ ವತಿಯಿಂದ ಮೆರವಣಿಗೆ ಹಾದು ಹೋಗುವ ಮಾರ್ಗದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶಿವಾಜಿ ವೃತ್ತಕ್ಕೆ ಸುಣ್ಣ ಬಣ್ಣ, ಅಲಂಕಾರ, ಎಲ್ಲ ವೃತ್ತಗಳ ಮೇಲೆ ದೀಪಾಲಂಕಾರ ಮಾಡಲಾಗುವುದು. ಶಿಕ್ಷಣ ಇಲಾಖೆ ವತಿಯಿಂದ ಛತ್ರಪತಿ ಶಿವಾಜಿಯವರ ಜೀವನ ಚರಿತ್ರೆ ನಿಬಂಧ ಸ್ಪರ್ಧೆ ಏರ್ಪಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2 ಕಲಾ ತಂಡಗಳ ವ್ಯವಸ್ಥೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಎಂ.ಡಿ.ಶಕೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ಸಮಾಜದ ಮುಖಂಡರಾದ ಮದನರಾವ್ ಬಿರಾದಾರ್, ರಘುನಾಥ್ ಜಾಧವ್, ವೆಂಕಟರಾವ್ ಮಹಾಂದೆ, ಮಾಧವರಾವ್ ಗುರೂಜಿ, ರಾಜಕುಮಾರ್ ಪಾಟೀಲ್, ಪಂಡಿತ್ ಜಾಧವ್, ಅಶೋಕ್ ಚವ್ಹಾಣ, ಸುರೇಶ್ ರಾಠೋಡ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







