Bidar | ಸಾಕ್ಷರತೆಯಿಂದ ಮಹಿಳೆಯರ ಸಬಲೀಕರಣವಾಗುತ್ತದೆ : ಶೈನಿ ಪ್ರದೀಪ್ ಗುಂಟಿ

ಬೀದರ್: ಸಾಕ್ಷರತೆ ಮತ್ತು ಶಿಕ್ಷಣವೇ ಮಹಿಳಾ ಸಬಲೀಕರಣದ ಅಡಿಪಾಯವಾಗಿದ್ದು, ಶೈಕ್ಷಣಿಕ ಸಾಧನೆಯ ಮೂಲಕ ಮಹಿಳೆಯರು ತಮ್ಮದೇ ಆದ ಅಸ್ಮಿತೆಯನ್ನು ರೂಪಿಸಿಕೊಳ್ಳಬಹುದು ಎಂದು ಅಕ್ಕಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಮತ್ತು ಅಕ್ಕಪಡೆ ವತಿಯಿಂದ ಆಯೋಜಿಸಿದ್ದ ‘ಅಕ್ಕಪಡೆ ಕ್ಯೂಆರ್ ಕೋಡ್ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿಗೂ ಅನೇಕ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಶಿಕ್ಷಣದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ಅಕ್ಕಪಡೆ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ಸುರಕ್ಷಿತವಾಗಿ ಮತ್ತು ಗೌಪ್ಯವಾಗಿ ಪೊಲೀಸ್ ಇಲಾಖೆಗೆ ತಿಳಿಸಲು ಕ್ಯೂಆರ್ ಕೋಡ್ ಆಧಾರಿತ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಸಿಪಿಐ ಅಲಿಸಾಬ್ ಮಾತನಾಡಿ, ಮಹಿಳೆಯರು ಯಾವುದೇ ರೀತಿಯ ಹಿಂಸೆಯನ್ನು ಕ್ಯೂಆರ್ ಕೋಡ್ ಮೂಲಕ ಗೌಪ್ಯವಾಗಿ ಪೊಲೀಸ್ ಇಲಾಖೆಗೆ ತಲುಪಿಸಬಹುದಾಗಿದೆ. ಈ ವ್ಯವಸ್ಥೆಯ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಅಕ್ಕಪಡೆ ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರ ಮೇಲಿನ ಅಪರಾಧಗಳು ಹಾಗೂ ಪೋಕ್ಸೊ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಪಿಯು ಕಾಲೇಜಿನ ಪ್ರಾಚಾರ್ಯ ಡಾ. ರುದ್ರಮಣಿ ಮಠಪತಿ ಮಾತನಾಡಿ, ಅಕ್ಕಪಡೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಬೆಳೆಸುವಲ್ಲಿ ಶೈನಿ ಪ್ರದೀಪ್ ಗುಂಟಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಎಸ್ಐ ಕನ್ಯಾಕುಮಾರಿ, ಬೀದರ್ ಅಕ್ಕಪಡೆಯ ಸಂಗೀತಾ, ತಾಂತ್ರಿಕ ವಿಭಾಗದ ವೈಭವ್, ಮಂಜುಳಾ, ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯೆ ಮಾಯಾ ಮುರಾಳೆ, ಬಸವೇಶ್ವರ್ ಪಿಜಿ ಕಾಲೇಜಿನ ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






