Bidar | ಸಾಹಿತ್ಯ ಮನುಷ್ಯನನ್ನು ಮಾನವೀಯಗೊಳಿಸುವ ಶಕ್ತಿಯುತ ಸಾಧನ: ದಿನೇಶ್ ಅಮೀನ್ ಮಟ್ಟು
22ನೇ ಕನ್ನಡ ಸಾಹಿತ್ಯ ಸಮ್ಮೇಳನ

ಬೀದರ್: ಸಾಹಿತ್ಯವನ್ನು ಯಾಕೆ ಓದಬೇಕು ಎಂದರೆ, ಅದು ಮನುಷ್ಯನನ್ನು ಹೆಚ್ಚು ಮಾನವೀಯಗೊಳಿಸುತ್ತದೆ. ಸಾಹಿತ್ಯವನ್ನು ಗಂಭೀರವಾಗಿ, ಪ್ರೀತಿಯಿಂದ, ನಿಷ್ಠೆಯಿಂದ ಹಾಗೂ ಸದುದ್ದೇಶದಿಂದ ಓದಿದವರು ಸಮಾಜದಲ್ಲಿ ಕೆಟ್ಟವರಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಸಂಸ್ಕೃತಿ ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಶನಿವಾರ ನಡೆದ 22ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಭಕ್ತರಿಲ್ಲದೆ ದೇವರಿಲ್ಲ. ಅದೇ ರೀತಿ ಓದುಗರಿಲ್ಲದೆ ಸಾಹಿತ್ಯವೂ ಇಲ್ಲ, ಸಾಹಿತಿಗಳೂ ಇರಲು ಸಾಧ್ಯವಿಲ್ಲ. ಆದ್ದರಿಂದ ಒಬ್ಬ ಓದುಗರ ಪ್ರತಿನಿಧಿಯಾಗಿ ನಾನು ಈ ಸಮ್ಮೇಳನವನ್ನು ಉದ್ಘಾಟಿಸಿದ್ದೇನೆ ಎಂದರು.
ಮನುಷ್ಯನ ಜೀವಿತಾವಧಿ ಬಹಳ ಕಡಿಮೆ. ತನ್ನ ಸ್ವಂತ ಅನುಭವದ ಮೂಲಕ ಆತ ಕಂಡುಕೊಳ್ಳುವುದು ಕೂಡ ಸೀಮಿತವಾಗಿರುತ್ತದೆ. ಇಡೀ ಜಗತ್ತು ಹಾಗೂ ಸಮಾಜದ ವಿವಿಧ ಅನುಭವಗಳನ್ನು ತನ್ನದಾಗಿಸಿಕೊಳ್ಳಲು ಇರುವ ಏಕೈಕ ಸಾಧನ ಸಾಹಿತ್ಯವಾಗಿದೆ ಎಂದು ಹೇಳಿದರು.
ಸಾಹಿತ್ಯ ಓದುವವರು, ಕವಿತೆ, ಕಥೆ, ಕಾದಂಬರಿಗಳನ್ನು ಬರೆಯುವವರು ಲೌಕಿಕ ಬದುಕಿನಲ್ಲಿ ಹೆಚ್ಚು ಸಂಪಾದನೆ ಮಾಡದಿದ್ದರೂ ಸಂತೋಷದಿಂದಿರುತ್ತಾರೆ. ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡುವುದಕ್ಕೆ ಮಾತ್ರ ಪೋಷಕರು ಹವಣಿಸಬಾರದು. ಅವರಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಕಲಿಯಲು ಪ್ರೋತ್ಸಾಹಿಸಬೇಕು. ತಮ್ಮ ಪ್ರತಿಭೆಯ ಕ್ಷೇತ್ರದಲ್ಲಿಯೇ ಬೆಳೆಯಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಜನಜಾಗೃತಿಯ ಕುಲುಮೆ ಸದಾ ಉರಿಯುತ್ತಿರಬೇಕು. ಅದರಲ್ಲಿರುವ ಬೆಂಕಿ ಆರಲು ಬಿಡಬಾರದು. ಈ ಕುಲುಮೆಯ ಬೆಂಕಿಯನ್ನು ಕಾಯ್ದುಕೊಳ್ಳಲು ಸಾಹಿತ್ಯ ಒಂದು ದೊಡ್ಡ ಸಾಧನವಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿರುವ ಬಹುತೇಕ ಕನ್ನಡ ಪ್ರಾಧ್ಯಾಪಕರು ವಿಶ್ವವಿದ್ಯಾಲಯಗಳಿಗಷ್ಟೇ ಸೀಮಿತವಾದ ಸಾಹಿತಿಗಳಾಗಿದ್ದಾರೆ. ಅವರಿಗೆ ಸಮಾಜದ ಬಗ್ಗೆ ಹಾಗೂ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಕಾಳಜಿ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ನಾಡಿನಲ್ಲಿ ಹುಟ್ಟಿದವರು ಯಾರೂ ಬಸವಣ್ಣನವರ ಪ್ರಭಾವದಿಂದ ಹೊರಗುಳಿಯಲು ಸಾಧ್ಯವಿಲ್ಲ. ಹಾಗೆ ಹೊರಗುಳಿದರೆ ಅವರು ಮನುಷ್ಯರಲ್ಲ. ಶರಣ ಚಳವಳಿಯು ಎಲ್ಲ ಚಳವಳಿಗಳ ಮಾತೃ ಚಳವಳಿಯಾಗಿದೆ. ದಲಿತ, ರೈತ, ಕಾರ್ಮಿಕ, ಮಹಿಳಾ ಹಾಗೂ ಭಾಷಾ ಚಳವಳಿಗಳ ಆಶಯಗಳೆಲ್ಲವೂ ಶರಣ ಚಳವಳಿಯಲ್ಲಿವೆ ಎಂದು ನುಡಿದರು.
ಒಂಬತ್ತು ಶತಮಾನಗಳ ಹಿಂದೆ ಶರಣರ ಮೇಲೆ ದೌರ್ಜನ್ಯ, ಅವರ ವಿರುದ್ಧ ಸಂಚು, ದೈಹಿಕ ದಾಳಿ ಹಾಗೂ ಚಾರಿತ್ರ್ಯಹರಣ ಮಾಡುವ ಪ್ರಯತ್ನಗಳು ನಡೆದಿದ್ದವು. ಇಂದಿಗೂ ಅದೇ ರೀತಿಯ ಘಟನೆಗಳು ನಡೆಯುತ್ತಿವೆ ಎಂದರೆ ನಾವು ಗಂಭೀರವಾಗಿ ಯೋಚಿಸಬೇಕಿದೆ. ಇತ್ತೀಚೆಗೆ ಬಸವಣ್ಣನವರ ಶರಣ ಚಳವಳಿಯ ಗುರುತಾಗಿರುವ ವಿಷಯಕ್ಕೆ ಸಂಬಂಧಿಸಿದ ಪುಸ್ತಕವೊಂದು ಬಿಡುಗಡೆಯಾಗಿದೆ. ಅದರ ಲೇಖಕರು ಯೂಟ್ಯೂಬ್ನಲ್ಲಿ ಮಾತನಾಡಿರುವುದನ್ನು ಕೇಳಿದರೆ ಇತಿಹಾಸದ ಚಕ್ರ ಮುಂದಕ್ಕೆ ಸಾಗದೆ ಒಂಬತ್ತು ಶತಮಾನಗಳಷ್ಟು ಹಿಂದಕ್ಕೆ ಹೋಗಿದೆಯೇನೋ ಎಂಬ ಭಾವನೆ ಮೂಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವೊಬ್ಬರು ಬಸವಣ್ಣನವರನ್ನು ಕೊಲೆಗಾರ ಎಂದು ಕರೆಯುವುದು, ಅವರು ಸುಳ್ಳು ಹೇಳಿದ್ದಾರೆ ಹಾಗೂ ವಚನಗಳನ್ನೇ ಬರೆದಿಲ್ಲ ಎಂದು ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವವರು ಕೇವಲ ಲಿಂಗಾಯತರಾಗಿರುವುದು ಆಶ್ಚರ್ಯಕರವಾಗಿದೆ. ಶರಣ ಚಳವಳಿ ಕೇವಲ ಲಿಂಗಾಯತ ಅಥವಾ ವೀರಶೈವ ಸಮುದಾಯಕ್ಕೆ ಸೀಮಿತವಾದ ಚಳವಳಿಯಲ್ಲ. ಅದು ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಚಳವಳಿಯೂ ಆಗಿದೆ. ಬಸವಣ್ಣನವರ ಚಾರಿತ್ರ್ಯಹರಣವಾದರೆ ಅದು ಎಲ್ಲರ ಚಾರಿತ್ರ್ಯಹರಣವಾದಂತೆ. ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರು. ಅವರಿಗೆ ಮಾಡಿದ ಚಾರಿತ್ರ್ಯಹರಣ ಇಡೀ ಕರ್ನಾಟಕದ ಚಾರಿತ್ರ್ಯಹರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಧರ್ಮವು ಮನುಧರ್ಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ವೈದಿಕಶಾಹಿಯು ತನ್ನ ವಿರುದ್ಧ ಇರುವವರನ್ನು ದಮನಿಸಲು ನಾಲ್ಕು ಮಾರ್ಗಗಳನ್ನು ಅನುಸರಿಸುತ್ತದೆ. ಮೊದಲಿಗೆ ತನ್ನ ವಿರುದ್ಧ ಇರುವವರನ್ನು ನಿರ್ಲಕ್ಷಿಸುತ್ತದೆ. ಎರಡನೆಯದಾಗಿ ಮಹಾನ್ ಪುರುಷರನ್ನು ದೇವರನ್ನಾಗಿ ಮಾಡುತ್ತದೆ. ಮೂರನೆಯದಾಗಿ ಅವರನ್ನು ತನ್ನವರೇ ಎಂದು ಹೇಳಿಕೊಳ್ಳುವ ಮೂಲಕ ತನ್ನ ವಶಕ್ಕೆ ಪಡೆಯಲು ಪ್ರಯತ್ನಿಸುತ್ತದೆ. ಈ ಮೂರು ಮಾರ್ಗಗಳು ವಿಫಲವಾದಾಗ ಕೊನೆಯದಾಗಿ ಅವರ ಚಾರಿತ್ರ್ಯಹರಣಕ್ಕೆ ಮುಂದಾಗುತ್ತದೆ. ಸಮಾಜ ಬದಲಾವಣೆಗೆ ಶ್ರಮಿಸಿದವರ ವಿರುದ್ಧವೂ ಇಂತಹ ಪ್ರಯತ್ನಗಳು ನಡೆದಿವೆ. ಇದೀಗ ಬಸವಣ್ಣನವರ ತತ್ವಗಳ ವಿರುದ್ಧವೂ ಇದೇ ರೀತಿಯ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ಧ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.
ಸಾಹಿತ್ಯ ಜನರ, ಶೋಷಿತರ ಧ್ವನಿಯಾಗಲಿ:
ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ್ ಮಾತನಾಡಿ, ಸಾಹಿತಿಗಳು ಹೋರಾಟದ ಭಾಗವಾಗಬೇಕು. ನಮ್ಮ ಭಾಗದಲ್ಲಿ ಸಾಹಿತಿಗಳು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪ್ರವೃತ್ತಿ ಹೆಚ್ಚಾಗಬೇಕಿದೆ. ಗಟ್ಟಿಯಾದ ಸಾಹಿತ್ಯ ರೂಪುಗೊಳ್ಳಬೇಕು. ನಮ್ಮ ಸಾಹಿತ್ಯವು ಜನರ, ಶೋಷಿತರ ಹಾಗೂ ಅವಮಾನಿತರ ಧ್ವನಿಯಾಗಬೇಕು ಎಂದರು.
ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಆಗಾಗ ಭಾಲ್ಕಿ ಮತ್ತು ಬೀದರ್ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದ್ದರಿಂದ ಗಡಿಭಾಗದಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳು ನಡೆಯುವುದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.
ಮಾತೃಭಾಷೆಯ ಮೂಲಕವೇ ನಮಗೆ ಜ್ಞಾನವನ್ನು ಸಮರ್ಪಕವಾಗಿ ಗ್ರಹಿಸಲು ಸಾಧ್ಯ. ಆದ್ದರಿಂದ ಜಗತ್ತಿನ ಯಾವುದೇ ಭಾಷೆಯನ್ನು ಓದಿದರೂ ಅದನ್ನು ಭಾಷೆಯಾಗಿ ಕಲಿಯಬೇಕು. ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳು ಎಂದಿಗೂ ಖಾಸಗೀಕರಣವಾಗಬಾರದು ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣವನ್ನೂ ಪ್ರಾದೇಶಿಕ ಭಾಷೆಯಲ್ಲಿಯೇ ಬೋಧಿಸಬೇಕು. ಆಗ ಮಾತ್ರ ಕನ್ನಡದಲ್ಲಿಯೂ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಬೀದರ್ ಜಿಲ್ಲೆಯ ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳೇ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನದ ಆಶಯಗಳಲ್ಲಿ ಬಸವತತ್ವದ ಪ್ರತಿಬಿಂಬ:
ಸಂವಿಧಾನದ ಆಶಯಗಳನ್ನು ಗಮನಿಸಿದಾಗ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳು ಬಸವತತ್ವದಲ್ಲಿಯೇ ಕಾಣಸಿಗುತ್ತವೆ. ಸಂವಿಧಾನವು ನಂತರ ರಚನೆಯಾಯಿತು. ಸಂವಿಧಾನ ಇದ್ದ ಕಾರಣಕ್ಕೆ ಬಸವತತ್ವ ಹುಟ್ಟಿಕೊಂಡಿದ್ದಲ್ಲ; ಬಸವತತ್ವದ ಆಶಯಗಳು ಸಂವಿಧಾನದಲ್ಲಿ ಪ್ರತಿಫಲಿಸಿವೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.
ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ:
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಚೆನ್ನಶೆಟ್ಟಿ ಮಾತನಾಡಿ, ಪರಿಷತ್ತಿನಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಇದೇ ವೇದಿಕೆಯಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ನಮ್ಮ ಮಾತುಗಳು ವೇದಿಕೆಗೆ ಮಾತ್ರ ಸೀಮಿತವಾಗಿದ್ದು, ಅವು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬ ನೋವು ಪರಿಷತ್ತಿಗಿದೆ. ಅನೇಕ ಬಾರಿ ನಿರ್ಣಯಗಳನ್ನು ಮಂಡಿಸಿದರೂ ಅವು ಅಲ್ಲಿಯೇ ಉಳಿಯುತ್ತವೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ಕಡಿಮೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಶಾಲೆಗಳು ಮುಚ್ಚುವುದಿಲ್ಲ ಎಂದು ಹೇಳುತ್ತಲೇ, ಕನ್ನಡ ಶಾಲೆಗಳ ಕತ್ತು ಹಿಸುಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ‘ಚಾವಡಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ರಂಗಮಂದಿರದವರೆಗೆ ಸಮ್ಮೇಳನದ ಸರ್ವಾಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹುಲಸೂರಿನ ಶಿವಾನಂದ ಸ್ವಾಮಿ ಹಾಗೂ ಡಾ. ಬಸವಲಿಂಗ ಅವಧೂತರು ನೇತೃತ್ವ ವಹಿಸಿದ್ದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ವಿನೋದಕುಮಾರ್ ಅಪ್ಪೆ, ಡಾ. ರಜನಿಶ್ ವಾಲಿ, ಬಾಬು ವಾಲಿ, ಸೋಮಶೇಖರ್ ಚಿದ್ರಿ, ಜೈರಾಜ್ ಖಂಡ್ರೆ, ಅನಿಲಕುಮಾರ್ ಬೆಲ್ದಾರ್, ಬಾಬುರಾವ್ ಪಾಸ್ವಾನ್, ವಿನಯ್ ಮಾಳಗೆ, ಬಸವರಾಜ್ ಧನ್ನೂರ್, ಪಂಚಾಕ್ಷರಿ ಪುಣ್ಯಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






