ಬೀದರ್ | ಮಾ.22, 23 ರಂದು ಮಹಾದಂಡನಾಯಕರ ಸ್ಮರಣೋತ್ಸವ : ಶ್ರೀಕಾಂತ್ ಸ್ವಾಮಿ

ಬೀದರ್ : ಬಸವ ತತ್ವ ನಾಡಿನಾದ್ಯಂತ ಪಸರಿಸಿ, ಜನಮನಕ್ಕೆ ತಲುಪಿಸಿದ ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರು ಬಸವಾತ್ಮಜೆ ಮಾತೆ ಮಹಾದೇವಿಯವರ 6ನೇ ಸಂಸ್ಮರಣೆ ಹಾಗೂ ಲಿಂಗಾನಂದ ಸ್ವಾಮಿಗಳ ಸ್ಮರಣೆ ಪ್ರಯುಕ್ತ ನಗರದಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ಮರಣೋತ್ಸವದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ್ ಸ್ವಾಮಿ ತಿಳಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಂಯುಕ್ತಾಶ್ರಯದಲ್ಲಿ ಮಾ.22 ಮತ್ತು 23 ರಂದು ಎರಡು ದಿವಸಗಳ ಕಾಲ ನಗರದ ಪಾಪನಾಶ ದೇವಸ್ಥಾನದ ಸಮೀಪವಿರುವ ಸ್ವಾಮಿ ಸಮರ್ಥ ಸಭಾ ಮಂಟಪದಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಲಿಂಗಾಯತ ಧರ್ಮಕ್ಕೆ ಮಾತಾಜಿ ಕೊಡುಗೆ ಅಪಾರವಾಗಿದೆ. ದೇಶದಾದ್ಯಂತ ನೂರಾರು ಬಸವ ಧರ್ಮ ಸಮ್ಮೇಳನ, ಲಿಂಗಾಯತ ಧರ್ಮ ಸಮ್ಮೇಳನ, ಶರಣ ಮೇಳ, ಕಲ್ಯಾಣ ಪರ್ವ, ಗಣಮೇಳ, ಬಸವೋತ್ಸವ, ಶರಣೋತ್ಸವ ಆಯೋಜಿಸಿ ಗೌಣವಾಗಿದ್ದ ಬಸವಾದಿ ಶರಣರ ಸಂದೇಶ ಜನಸಾಮಾನ್ಯರಲ್ಲಿ ಬಿತ್ತಿ ಬೆಳಗಿದ್ದಾರೆ ಎಂದರು.
ಈ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಅಲ್ಲದೇ ಗಡಿ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಸುಮಾರು 5 ರಿಂದ 6 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಬಂದತಹ ಎಲ್ಲರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಜಿಲ್ಲೆಯಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ. ಚನ್ನಬಸವಾನಂದ್ ಸ್ವಾಮೀಜಿ, ಬಸವ ಮಂಟಪದ ಪೂಜ್ಯ ಸದ್ಗುರು ಸತ್ಯಾದೇವಿ, ಬೆಳಗಾವಿಯ ಅಕ್ಕ ನಾಗಲಾಂಬಿಕಾ ಮಾತಾಜಿ, ಅಕ್ಕಮಹಾದೇವಿ ಮಾತಾಜಿ, ಓಂಕಾರೇಶ್ವರ್ ಸ್ವಾಮೀಜಿ, ಶಿವರಾಜ್ ಪಾಟೀಲ್ ಅತಿವಾಳ್, ಶಿವಶರಣಪ್ಪ ಪಾಟೀಲ್, ಮಲ್ಲಿಕಾರ್ಜುನ್ ಶಾಪುರ್, ವಿಶ್ವನಾಥ್ ಪಾಟೀಲ್, ಶಿವು ಜನ್ಯ, ಮಲ್ಲಿಕಾರ್ಜುನ ಬುಕ್ಕಾ, ರವಿಕಾಂತ್ ಬಿರಾದಾರ್, ಬಸವರಾಜ್ ಸಂಗಮದ್ ಹಾಗೂ ಬಸವಂತರಾವ್ ಬಿರಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







