ಬೀದರ್ | ವಸತಿಯುತ ಶಾಲೆಗಳ 6ನೇ ತರಗತಿ ಪ್ರವೇಶ ಅರ್ಜಿ ದಿನಾಂಕ ವಿಸ್ತರಿಸಲು ಮಹೇಶ್ ಗೋರಾನಾಳಕರ್ ಒತ್ತಾಯ

ಬೀದರ್: ವಿವಿಧ ವಸತಿಯುತ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣದಂತೆ ಅಗತ್ಯವಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳು ಸಮಯಕ್ಕೆ ದೊರಕದ ಕಾರಣ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅಸಾಧ್ಯವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜ.25ರ, 2026 ಆಗಿದ್ದು, ಹಲವಾರು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣದ ಪ್ರಕಾರ ಹೊಸ ಪ್ರಮಾಣ ಪತ್ರಗಳನ್ನು ಇನ್ನೂ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಗೆ ಕನಿಷ್ಠ 15 ದಿನಗಳ ಕಾಲಾವಕಾಶ ವಿಸ್ತರಿಸಬೇಕು. ಅಲ್ಲದೆ, ತಾತ್ಕಾಲಿಕವಾಗಿ ಹಳೆಯ ದಾಖಲೆಗಳ ಆಧಾರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಜೊತೆಗೆ ತಹಸೀಲ್ದಾರ್‌ಗಳಿಗೆ ತ್ವರಿತವಾಗಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ವಿತರಿಸುವಂತೆ ಸರ್ಕಾರ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.







