ಬೀದರ್ |ಎಪಿಕೆ ಫೈಲ್ ಮೂಲಕ ವಂಚನೆ : 1 ಲಕ್ಷ 96 ಸಾವಿರ ರೂ.ಕಳೆದುಕೊಂಡ ವ್ಯಕ್ತಿ ; ಪ್ರಕರಣ ದಾಖಲು

ಬೀದರ್ : ಎಪಿಕೆ ಫೈಲ್ ತೆರೆದು ಅದರಲ್ಲಿ ಮಾಹಿತಿ ತುಂಬಿದ ಬಳಿಕ ಅಕೌಂಟ್ ನಿಂದ 1 ಲಕ್ಷ 96 ಸಾವಿರ ರೂ.ನಗದು ವಂಚನೆಗೈಯ್ಯಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದ ಗೋಲೆಖಾನಾ ಬಡಾವಣೆಯ ನಿವಾಸಿ ಮಹಮ್ಮದ್ ಸಾಬೇರ್ (66) ಹಣ ಕಳೆದುಕೊಡು ಮೋಸ ಹೋದ ವ್ಯಕ್ತಿಯಾಗಿದ್ದಾರೆ.
ಆ.9ರಂದು ನನ್ನ ಕಾರಿನ ಫಾಸ್ಟ್ ಟ್ಯಾಗ್ ಬ್ಲಾಕ್ ಆಗಿದ್ದು, ನಾನು ರಿಚಾರ್ಜ್ ಮಾಡಲು ಪ್ರಯತ್ನ ಮಾಡಿದ್ದೇನೆ. ಆದರೆ ಅದು ರಿಚಾರ್ಜ್ ಆಗಿರಲಿಲ್ಲ. ಇದರಿಂದಾಗಿ ನಾನು ಫಾಸ್ಟ್ ಟ್ಯಾಗ್ ಹೆಲ್ಪ್ ಲೈನ್ ಅನ್ನು ಗೂಗಲ್ ಅಲ್ಲಿ ಸರ್ಚ್ ಮಾಡಿದ್ದೇನೆ. ಈ ವೇಳೆ ನನಗೆ ಒಂದು ನಂಬರ್ ನಿಂದ ಒಂದು ಲಿಂಕ್ ಹಾಗೂ ಫಾಸ್ಟ್ ಟ್ಯಾಗ್ ಕಂಪ್ಲೇನ್ ಎಂಬ ಎಪಿಕೆ ಇನ್ಸ್ಟಾಲ್ ಆಗಿರುತ್ತದೆ. ಅದರಲ್ಲಿ ಕೇಳಿರುವ ಮಾಹಿತಿ ನಾನು ಭರ್ತಿ ಮಾಡಿದ್ದೇನೆ. ಬಳಿಕ ನಾನು ಆ.12ರಂದು ಫೋನ್ ಪೇ ಬ್ಯಾಲೆನ್ಸ್ ಪರಿಶೀಲಿಸಿದಾಗ ಆ.9,10ರಂದು ನನ್ನ ಅಕೌಂಟ್ ನಿಂದ ಹಂತ ಹಂತವಾಗಿ ಸುಮಾರು 1 ಲಕ್ಷ 96 ಸಾವಿರ ರೂ. ಅಪರಿಚಿತರಿಗೆ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ನನ್ನನ್ನು ಮೋಸ ಮಾಡಿ ಹಣ ವರ್ಗಾವಣೆ ಮಾಡಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.





