Bidar | ಒಳಮೀಸಲಾತಿ ವರದಿ ವಿರೋಧಿಸಿ ಮಾ.17ರಂದು ಬೃಹತ್ ಪ್ರತಿಭಟನೆ

ಬೀದರ್: ಒಳಮೀಸಲಾತಿ ವರದಿಯನ್ನು ವಿರೋಧಿಸಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಮಾ.17ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಮಹೇಶ್ ಗೋರನಾಳಕರ್ ತಿಳಿಸಿದ್ದಾರೆ.
ನಗರದ ಹೋಟೆಲ್ ವೃಂದಾವನದಲ್ಲಿ ಮಂಗಳವಾರ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಕಾರ್ಯಕಾರಿ ಸಮಿತಿಯ ಸಭೆ ನಡೆಸಿ, ಹೋರಾಟ ರೂಪುರೇಷೆ ಕುರಿತು ಚರ್ಚಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಒಳಮೀಸಲಾತಿಯಿಂದ ಬಲಗೈ ಸಮುದಾಯದವರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳ ಆಯ್ಕೆಯಲ್ಲಿ ತಾರತಮ್ಯವಾಗುತ್ತಿದ್ದು, ರೋಸ್ಟರ್ ಬಿಂದುವಿನಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದು ಗೋರನಾಳಕರ್ ಹೇಳಿದರು.
ಉದ್ದೇಶಪೂರ್ವಕವಾಗಿ ಬಲಗೈ ಸಮುದಾಯದ ಸಚಿವರ ತೇಜೋವಧೆ ಮಾಡಿ ಅಸ್ಪೃಶ್ಯ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಪ್ರತಿಭಟನೆ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಅವರು ತಿಳಿಸಿದರು.
ಇದಲ್ಲದೆ ಸಂಬಂಧಪಟ್ಟ ಶಾಸಕರು ಹಾಗೂ ಸಚಿವರು ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಜಿಲ್ಲೆಯ ಅಂಬೇಡ್ಕರ್ ವಾದಿಗಳು, ಬಲಗೈ ಸಮುದಾಯದ ಹೋರಾಟಗಾರರು, ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು, ನಿವೃತ್ತ ನೌಕರರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ವಿದ್ಯಾರ್ಥಿಗಳು, ಪದವೀಧರರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಅರುಣ್ ಪಟೇಲ್, ಪವಣ್ ಮೀಠಾರೆ, ಸಂಜುಕುಮಾರ್ ಸಾಗರ್, ಪ್ರದೀಪ್ ನಾಟೇಕರ್, ರಾಹುಲ್ ಡಾಂಗೆ ಹಾಗೂ ಪ್ರಕಾಶ್ ರಾವಣ್ ಅವರು ಉಪಸ್ಥಿತರಿದ್ದರು.







