Bidar | ಡಿ.6ರಂದು ʼದಲಿತ-ಶೋಷಿತರ ಜನಜಾಗೃತಿʼ ಬಹಿರಂಗ ಸಭೆ : ಉಮೇಶಕುಮಾರ್ ಸ್ವಾರಳ್ಳಿಕರ್

ಬೀದರ್: ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿ.6ರಂದು ದಲಿತ–ಶೋಷಿತರ ಜನಜಾಗೃತಿ ಬೃಹತ್ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಲಬುರಗಿ ವಿಭಾಗೀಯ ಸಂಚಾಲಕ ಉಮೇಶಕುಮಾರ್ ಸ್ವಾರಳ್ಳಿಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸಂವಿಧಾನವನ್ನು ನೀಡಿದ್ದಾರೆ. ಆದರೆ, ಅವರು ಅಗಲಿ 70 ವರ್ಷಗಳು ಕಳೆದರೂ ದಲಿತರು ಮತ್ತು ಶೋಷಿತ ಸಮುದಾಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಮತ್ತು ಅವಕಾಶಗಳು ದೊರೆಯಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ, ಇಂದಿಗೂ ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ, ಶೋಷಣೆ ಮತ್ತು ಅಸಮಾನತೆ ಮುಂದುವರಿದಿವೆ. ಇವುಗಳನ್ನು ತೊಡೆದುಹಾಕಲು ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳು ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ರಾಜಕೀಯ ಕ್ಷೇತ್ರದಲ್ಲಿಯೂ ದಲಿತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಸಂವಿಧಾನ ನೀಡಿರುವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಹಿತಕ್ಕಾಗಿ ಮಾತ್ರ ಹೋರಾಡಲಿಲ್ಲ. ದೇಶದ ಸಮಗ್ರ ಅಭಿವೃದ್ಧಿ, ರಾಷ್ಟ್ರೀಯ ಏಕತೆ ಹಾಗೂ ಪ್ರತಿಯೊಬ್ಬ ನಾಗರಿಕನ ಗೌರವಯುತ ಬದುಕಿಗಾಗಿ ಶ್ರಮಿಸಿದರು. ಅವರು ರೂಪಿಸಿದ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಶೋಷಿತ ಸಮುದಾಯಗಳಲ್ಲಿ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಸಾಮಾಜಿಕ ನ್ಯಾಯದ ಪರ ಹೋರಾಟಕ್ಕೆ ಸಂಘಟಿತ ಶಕ್ತಿ ನಿರ್ಮಿಸುವುದು ಹಾಗೂ ಯುವಜನರಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಬಿತ್ತುವುದೇ ಬಹಿರಂಗ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಡಿಸೆಂಬರ್ 6ರಂದು ನಡೆಯಲಿರುವ ಬೃಹತ್ ಜನಜಾಗೃತಿ ಸಭೆಯಲ್ಲಿ ದಲಿತಪರ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು, ಯುವಜನರು, ಬೌದ್ಧ ಭಿಕ್ಕುಗಳು, ಸಾಹಿತಿಗಳು, ಪ್ರಗತಿಪರ ಚಿಂತಕರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಸುಬ್ಬಣ್ಣ ಕರಕನಳ್ಳಿ, ಜಿಲ್ಲಾ ಸಂಚಾಲಕ ಅಂಬೇಡ್ಕರ್ ಪಿ. ಬೌದ್ದೆ, ಸಂಘಟನೆಯ ಪದಾಧಿಕಾರಿಗಳಾದ ನಾಗೇಶ್ ಸೈನೆ, ಈಶ್ವರ್ ಬಡಿಗೇರ್, ರಜಿನಿಕಾಂತ್ ನಾಗವಂಷಿ, ಜಿಲ್ಲಾ ವಿದ್ಯಾರ್ಥಿ ಘಟಕದ ಸಂಚಾಲಕ ಗೋವಿಂದ್ ಬಡಿಗೇರ್, ನಗರ ಸಹ ಸಂಚಾಲಕ ವಿಜಯಕುಮಾರ್ ಭಾವಿಕಟ್ಟಿ, ತಾಲೂಕು ಸಂಚಾಲಕ ದೀಪಕ್ ದೊಡ್ಡಿ, ಸಂಘಟನೆ ಸಂಚಾಲಕ ತುಕಾರಾಮ್ ಬೆಳ್ಳೂರ್, ಗೌತಮ್ ವಾಗರಾಜ್, ರವಿ ಪಾಟೀಲ್, ಶಿವಕುಮಾರ್, ಮಾಕುಂದಿ, ಮೀರಾಜ್ ಆಶೀಮ್ ಬೇಗ್, ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ರಂಜಿತಾ ಬಾಯಿ ಜೈನೂರು ಹಾಗೂ ವಿಜಯ್ ಸಾಮ್ರಾಟ್ ಉಪಸ್ಥಿತರಿದ್ದರು.






