ಬೀದರ್ | ಎಸ್‌ಐಆರ್ ವಿರೋಧಿಸಿ ಅ.12 ರಂದು ಬೃಹತ್ ಹೋರಾಟ : ಅಬ್ದುಲ್ ಮನ್ನಾನ್ ಸೇಠ್

ಬೀದರ್ : ಎಸ್‌ಐಆರ್ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷಗಳಾದ ಸಿಪಿಎಂ ಮತ್ತು ಸಿಪಿಐ ಸೇರಿದಂತೆ ಇತರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲೆಯಲ್ಲಿ ಅ.12ರಂದು ಬೃಹತ್ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಬ್ದುಲ್ ಮನ್ನಾನ್ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಐಆರ್ ಹೆಸರಲ್ಲಿ ದೇಶದಲ್ಲಿ ಸುಮಾರು 13 ಕೋಟಿ ಹಾಗೂ ಕರ್ನಾಟಕದಲ್ಲಿ 1 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಅನ್ಯಾಯದ ವಿರುದ್ಧ ಅ.10 ರಂದು ದಿಲ್ಲಿಯಲ್ಲಿ ವಿರೋಧ ಪಕ್ಷಗಳು ಮತ್ತು ಯುವಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ದಿಲ್ಲಿಯ 57 ಮೆಟ್ರೋ ರೈಲು ನಿಲ್ದಾಣಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಅರೆಸೇನಾ ಪಡೆಗಳನ್ನು (ಪ್ಯಾರಾ ಮಿಲಿಟರಿ ಫೋರ್ಸ್) ನಿಯೋಜಿಸುವ ಮೂಲಕ ದಿಲ್ಲಿ ನಗರವನ್ನು ಒಂದು ಸೇನಾ ಕಂಟೋನ್ಮೆಂಟ್ ರೀತಿಯಲ್ಲಿ ಮಾರ್ಪಡಿಸಲಾಗಿತ್ತು. ವಿರೋಧ ಪಕ್ಷದ ಪ್ರಮುಖ ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಪ್ರಜಾಪ್ರಭುತ್ವದಲ್ಲಿ ತಪ್ಪನ್ನು ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಖಂಡಿಸಿದರು.
ಆದ್ದರಿಂದಾಗಿ ಎಐಸಿಸಿ ನಿರ್ದೇಶನದ ಮೇರೆಗೆ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಅ.12 ರಂದು ಬೀದರ್‌ನ ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಪಿಐ ನಾಯಕ ಬಾಬುರಾವ್ ಹೊನ್ನಾ ಅವರು ಮಾತನಾಡಿ, ಕೇಂದ್ರ ಸರಕಾರ ಮತ್ತು ಆರ್‌ಎಸ್‌ಎಸ್ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಭಾರಿ ಆಪತ್ತು ಎದುರಾಗಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ʻಕೋಮುವಾದಿ ಫ್ಯಾಸಿಸಂ' ಅನ್ನು ವ್ಯವಸ್ಥಿತವಾಗಿ ಹೇರಲಾಗುತ್ತಿದ್ದು, ಇದು ಸಮಾಜವನ್ನು ವಿಭಜಿಸುವ ಅಪಾಯಕಾರಿ ಬೆಳವಣಿಗೆಯಾಗಿದೆ. ಆರ್‌ಎಸ್‌ಎಸ್ ಮತ್ತು ಕೇಂದ್ರ ಸರ್ಕಾರದ ಇಂತಹ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಧ್ವನಿ ಎತ್ತುವುದು ಇಂದಿನ ತುರ್ತು ಅಗತ್ಯವಾಗಿದೆ. ಎಸ್‌ಐಆರ್ ಎನ್ನುವುದು ಸಂವಿಧಾನ ವಿರೋಧಿಯಾಗಿದ್ದು, ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ಇದನ್ನು ಜಾರಿಗೊಳಿಸಲಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಎಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳು ಒಗ್ಗೂಡಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ್ ಅಪ್ಪೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಸಿಪಿಐ (ಎಂ) ಪಕ್ಷದ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ್, ಪ್ರಮುಖರಾದ ಪ್ರಭು ಸಂತೋಷಕರ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಗೋವರ್ಧನ್ ರಾಠೋಡ್, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಶಫಾಯತ್ ಅಲಿ, ವಿನೋದ್ ಮಾಳಗೆ ಹಾಗೂ ಇತರರು ಇದ್ದರು.






