Bidar | ಮುಖ್ಯ ಚುನಾವಣಾ ಆಯುಕ್ತರ ವಜಾ, ಎಸ್ಐಆರ್ ಸ್ಥಗಿತಕ್ಕೆ ಆಗ್ರಹಿಸಿ ಮನವಿ

ಬೀದರ್: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಶುಕ್ರವಾರ ಸಲ್ಲಿಸಿದ ಮನವಿಯಲ್ಲಿ, ಎಸ್ಐಆರ್ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳು ಹಾಗೂ ಕಾನೂನು ಉಲ್ಲಂಘನೆಗಳು ನಡೆದಿವೆ ಎಂಬ ಆರೋಪಗಳಿದ್ದು, ಈ ಪ್ರಕ್ರಿಯೆಯಿಂದ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಆತಂಕ ಎದುರಾಗಿದೆ ಎಂದು ಸಮಿತಿ ತಿಳಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದ ನಮೂನೆ-6ರೊಂದಿಗೆ ಹೆಚ್ಚುವರಿ ಘೋಷಣಾ ಪತ್ರಕ್ಕೆ ಸಹಿ ಪಡೆಯುವ ಕ್ರಮವು ಮತದಾರರ ಹಕ್ಕುಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.
ಎಸ್ಐಆರ್ ಪ್ರಕ್ರಿಯೆಯಿಂದ ಕೋಟ್ಯಂತರ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಅದನ್ನು ತಕ್ಷಣ ಸ್ಥಗಿತಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮುಂಬರುವ ಚುನಾವಣೆಗಳನ್ನು ತಡೆಹಿಡಿಯಬೇಕು. 2023ರ ಚುನಾವಣಾ ಆಯೋಗದ ನೇಮಕಾತಿ ಕಾಯ್ದೆಯನ್ನು ರದ್ದುಗೊಳಿಸಿ, ಸ್ವತಂತ್ರ ಹಾಗೂ ವಿಶ್ವಾಸಾರ್ಹ ಆಯ್ಕೆ ಪ್ರಕ್ರಿಯೆಯನ್ನು ರೂಪಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ಅರುಣ್ ಪಟೇಲ್, ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ್ ವಾಘಮಾರೆ, ಶ್ರೀನಿವಾಸ್ ದಯಾಳ್ ಭೀಮನಗರ್, ಶಿರೋಮಣಿ ಹಲಗೆ, ಶಿವರಾಜ್ ತಡಪಳ್ಳಿ, ಬಸವರಾಜ್ ಭಾವಿದೊಡ್ಡಿ, ವಿಜಯಕುಮಾರ್ ಭಾವಿಕಟ್ಟಿ, ರಾಹುಲ್ ಹಾಲಹಿಪ್ಪರ್ಗಿಕರ್, ಮಹೇಶ್ ಗೋರನಾಳ್, ಮಲ್ಲಿಕಾರ್ಜುನ್ ಮಾಳೆ, ಅಶೋಕ್ ಗಾಯಕವಾಡ್, ಗೌತಮ್ ಮುತ್ತಂಗಿಕರ್ ಹಾಗೂ ವಿನಯಕುಮಾರ್ ಮಾಳಗೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.






