Bidar | ಡಿಎಚ್ಒ, ಟಿಎಚ್ಒ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಲು ಆಗ್ರಹಿಸಿ ಮನವಿ

ಬೀದರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ್ ನಿರಗುಡೆ ಹಾಗೂ ಬಸವಕಲ್ಯಾಣ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ ಅವರ ಅಮಾನತು ಆದೇಶಗಳನ್ನು ಕೂಡಲೇ ಹಿಂಪಡೆದು, ಅವರನ್ನು ಕರ್ತವ್ಯಕ್ಕೆ ಮರು ನಿಯೋಜಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆಗ್ರಹಿಸಿವೆ.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಮನವಿಯಲ್ಲಿ, ಡಾ. ಧ್ಯಾನೇಶ್ವರ್ ನಿರಗುಡೆ ಅವರು ಪ್ರಾಮಾಣಿಕ, ದಕ್ಷ ಹಾಗೂ ಕರ್ತವ್ಯನಿಷ್ಠ ಅಧಿಕಾರಿಯಾಗಿದ್ದು, ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವೈಖರಿ ಮತ್ತು ಇಲಾಖೆಗೆ ಸಲ್ಲಿಸುತ್ತಿರುವ ಸೇವೆಯನ್ನು ಜಿಲ್ಲೆಯ ಅಧಿಕಾರಿಗಳು ಹಾಗೂ ನೌಕರರು ಗೌರವಿಸುತ್ತಾರೆ ಎಂದು ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 16ರಂದು ಬಸವಕಲ್ಯಾಣ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಗಣ್ಯರ ಭಾವಚಿತ್ರ ಅಳವಡಿಕೆಗೆ ಸಂಬಂಧಿಸಿದ ವಿಷಯದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂಬುದು ಪತ್ರಿಕಾ ವರದಿಗಳಿಂದ ತಿಳಿದು ಬಂದಿದೆ. ಬ್ಯಾನರ್‌ಗೆ ಸಂಬಂಧಿಸಿದ ಲೋಪದ ಕಾರಣಕ್ಕೆ ಕರ್ತವ್ಯನಿಷ್ಠ ಅಧಿಕಾರಿಗಳ ವಿರುದ್ಧ ಅಮಾನತಿನಂತಹ ಕಠಿಣ ಕ್ರಮ ಕೈಗೊಂಡಿರುವುದು ಅಧಿಕಾರಿ ಹಾಗೂ ನೌಕರರಲ್ಲಿ ಆತಂಕ ಮತ್ತು ಅಸಮಾಧಾನ ಉಂಟುಮಾಡಿದೆ ಎಂದು ಸಂಘಟನೆಗಳು ಹೇಳಿವೆ.
ಪ್ರಕರಣದ ವಾಸ್ತವಾಂಶಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಿ, ಅಮಾನತು ಆದೇಶಗಳನ್ನು ಹಿಂಪಡೆದು ಅಧಿಕಾರಿಗಳನ್ನು ಕರ್ತವ್ಯಕ್ಕೆ ಮರು ನಿಯೋಜಿಸಬೇಕು. ಕರ್ತವ್ಯನಿಷ್ಠ ಅಧಿಕಾರಿಗಳು ಮತ್ತು ನೌಕರರಿಗೆ ಅನಗತ್ಯ ಒತ್ತಡ ಅಥವಾ ಅನ್ಯಾಯವಾಗದಂತೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್ ಚಿದ್ರಿ, ಕಾರ್ಯದರ್ಶಿ ಪ್ರಭು ತುಗಾವೆ, ರಾಜ್ಯ ಪರಿಷತ್ ಸದಸ್ಯ ರಾಜಕುಮಾರ್ ಮಾಳಗೆ, ಸುನೀಲ್ ಕಸ್ತೂರೆ, ಸತ್ತಾರ್ ಪಟೇಲ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶಂಕ್ರೇಪ್ಪಾ ಬೊಮ್ಮಾ, ಕಾರ್ಯದರ್ಶಿ ಡಾ. ಸಂದೀಪ್ ಘೊಡೆ, ಖಜಾಂಚಿ ಡಾ. ಶಾಂತಲಿಂಗ್ ಪಾಟೀಲ್, ಡಾ. ಕೀರಣ್ ಪಾಟೀಲ್, ಡಾ. ದೀಪಾ ಖಂಡ್ರೆ, ಡಾ. ಅನೀಲ್ ಏಕ್ಲೂರೆ, ಡಾ. ಸೋಹಿಲ್, ಡಾ. ರಾಜಶೇಖರ್ ಪಾಟೀಲ್, ಡಾ. ಸಂಗಾರೆಡ್ಡಿ, ಡಾ. ಗಾಯತ್ರಿ, ಡಾ.ಅನೀಲ್ ಗಡ್ಡೆ, ಡಾ. ನಿತೀನ್ ಬಿರಾದಾರ್, ಡಾ. ರವಿ ಕಲಶೆಟ್ಟಿ, ಡಾ. ಶಶಿ ಭೂರೆ, ಡಾ. ಶೇಷಾಂಗ್, ಡಾ. ಅಶೋಕ್ ಮೈಲಾರೆ, ಡಾ. ಯುವರಾಜ್, ಡಾ. ಅಜಯ್, ಡಾ. ಶಿವಕುಮಾರ್ ಸಿದ್ದೇಶ್ವರ್, ಡಾ. ಹೂಲಸೂರೆ ಹಾಗೂ ಡಾ. ಇಸ್ಮಾಯಿಲ್ ಇದ್ದರು.






