ಬೀದರ್ | ಜಿಲ್ಲಾಡಳಿತದ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಸಚಿವ ಈಶ್ವರ್ ಖಂಡ್ರೆ, ರಹೀಮ್ ಖಾನ್ ಅವರಿಂದ ಚಾಲನೆ

ಬೀದರ್ : ನಗರದಲ್ಲಿ ಜಿಲ್ಲಾಡಳಿತದ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಇಂದು ಚಾಲನೆ ನೀಡಿದರು.
ಕಳೆದ 15 ವರ್ಷಗಳಿಂದ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯಾಗಿದ್ದ ಜಿಲ್ಲಾಡಳಿತದ ಸಂಕೀರ್ಣ ಕಟ್ಟಡದ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಅವರು, ಕಳೆದ ಏ.16 ರಂದು ಮುಖ್ಯಮಂತ್ರಿಗಳು ಜಿಲ್ಲಾಡಳಿತ ಸಂಕೀರ್ಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಇಂದು ಔಪಚಾರಿಕವಾಗಿ ಪೂಜೆ ಸಲ್ಲಿಸಿ ಭವ್ಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅಡೆತಡೆ ಬರದಂತೆ ಸುಲಲಿತವಾಗಿ ಕಾಮಗಾರಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ಚಾಲನೆ ನೀಡಲಾಗಿದೆ ಎಂದರು.
ಮೊದಲ ಹಂತದಲ್ಲಿ 8 ಕಚೇರಿಗಳ ಕಟ್ಟಡಗಳು ಆರಂಭವಾಗಲಿದೆ. ಎರಡನೇ ಹಂತದಲ್ಲಿ ಉಳಿದ ಕಚೇರಿಗಳು ಕೂಡ ಆರಂಭಿಸಲಾಗುವುದು. ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ. ಬರುವ ದಿನಗಳಲ್ಲಿ ಭವ್ಯ ಕ್ರೀಡಾಂಗಣವನ್ನು ಸಹ ನಿರ್ಮಿಸಲಾಗುವುದು. ಬೀದರ್ ನಗರ ಮಹಾನಗರ ಪಾಲಿಕೆಯನ್ನಾಗಿ ಘೋಷಿಸಲಾಗಿದ್ದು, ಹೆಚ್ಚಿನ ಅನುದಾನ ತರಲಾಗುವುದು. ಸ್ವಚ್ಛ, ಸುಂದರ, ಹಸಿರು ಜಿಲ್ಲೆಯಾಗಿ ನಿರ್ಮಿಸಲು ಸರಕಾರ ಬದ್ಧವಾಗಿದೆ. ಹಸಿರು ಹೆಚ್ಚಿಸಲು ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡಲು ಸಾರ್ವಜನಿಕರು ಕೈಜೊಡಿಸಬೇಕು ಎಂದು ಮನವಿ ಮಾಡಿದರು.
ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಉತ್ತಮ ಸುಸಜ್ಜಿತ ಭವ್ಯ ಜಿಲ್ಲಾಡಳಿತ ಸಂಕೀರ್ಣ ನಿರ್ಮಿಸಲಾಗುವುದು. ಮಹಾನಗರ ಪಾಲಿಕೆಗೆ 200 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ವಿನಂತಿಸಲಾಗಿದೆ. ಐಎಎಸ್ ಅಧಿಕಾರಿ ಹಾಗೂ 400 ಸಿಬ್ಬಂದಿಗಳ ನೇಮಕಕ್ಕೂ ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿಯ ಜೊತೆ ಪ್ರೀತಿ, ವಿಶ್ವಾಸ ಸೌಹಾರ್ದತೆಯಿಂದ ಬಾಳುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ನುಡಿದರು.
ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹಾಗೂ ಲೋಕೋಪಯೋಗಿ ಇಲಾಖೆ ಇಇ ಶಿವಶಂಕರ್ ಕಾಮಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







