Bidar | ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಆರೋಪ : ಕ್ರಮಕ್ಕೆ ಆಗ್ರಹ

ಬೀದರ್ : ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವ ಘಟನೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ಸುನೀಲ್ ಸಂಗಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕ್ ಖರ್ಗೆ ಹಾಗೂ ಆರೆಸ್ಸೆಸ್-ಬಿಜೆಪಿ ನಡುವಿನ ವಿಚಾರಸರಣಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಕೆಲವರು ಸಚಿವರಿಗೆ ಜೀವ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ಎಲ್ಲ ಸಂಘಟನೆಗಳು ಹಾಗೂ ವ್ಯಕ್ತಿಗಳು ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಆರೆಸ್ಸೆಸ್ ಸೇರಿದಂತೆ ಎಲ್ಲಾ ಸಂಘಟನೆಗಳು ಸಂವಿಧಾನದ ನಿಯಮಗಳಿಗೆ ಬದ್ಧರಾಗಿರಬೇಕು. ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಅಡಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಅವರ ಹೇಳಿಕೆಗಳಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ದಲಿತ ಸಮುದಾಯದ ಪ್ರಮುಖ ನಾಯಕರಾಗಿದ್ದು, ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜೀವ ಬೆದರಿಕೆ ಹಾಕಿದವರನ್ನು ತಕ್ಷಣ ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಸುನೀಲ್ ಸಂಗಮ್ ಆಗ್ರಹಿಸಿದ್ದಾರೆ.






