ಬೀದರ್ | ಗಾಯಾಳುಗಳನ್ನು ಸಚಿವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ : ಈಶ್ವರಸಿಂಗ್ ಠಾಕೂರ್

ಬೀದರ್ : ಪ್ರಯಾಗರಾಜ್ ಗೆ ಹೋಗಿ ಬರುವಾಗ ಫೆ.25 ರಂದು ಅಪಘಾತ ಸಂಭವಿಸಿ ನಗರದ ನಿವಾಸಿಗಳು ಗಾಯಗೊಂಡು ಮಹಾರಾಷ್ಟ್ರದ ವಾರ್ಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಜಿಲ್ಲೆಯ ಇಬ್ಬರು ಸಚಿವರು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಪಘಾತದಲ್ಲಿ 15 ಜನ ಗಾಯಗೊಂಡಿದ್ದರು. ಅದರಲ್ಲಿ ಐವರ ಸ್ಥಿತಿ ಗಂಭೀರವಾಗಿತ್ತು. ಇಬ್ಬರಂತೂ ಜೀವನ್ಮರಣದಲ್ಲಿ ಹೋರಾಡುತ್ತಿದ್ದರು. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ 14 ಗಾಯಾಳುಗಳನ್ನು ಬೀದರ್ ನಗರಕ್ಕೆ ಕರೆತಂದು ಸೂಕ್ತವಾದ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.
400 ಕಿ.ಮೀ ದೂರದ ವಾರ್ಧಾದಲ್ಲಿ ನಮ್ಮ ಜನ ಪರದಾಡುತ್ತಿದ್ದಾರೆ. ಆ ಕುಟುಂಬಸ್ಥರು ಕಡುಬಡವರಾಗಿದ್ದು, ಅವರಿಗೆ ಅಲ್ಲಿನ ಚಿಕಿತ್ಸೆ ವೆಚ್ಚ ಭರಿಸುವಷ್ಟು ಆರ್ಥಿಕ ಶಕ್ತಿ ಇಲ್ಲ. ಜಿಲ್ಲಾಡಳಿತ ಹಾಗೂ ಜಿಲ್ಲೆಯ ಇಬ್ಬರು ಸಚಿವರು ಜತೆಗೂಡಿ ವಾರ್ಧಾ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಿ ತಕ್ಷಣವೇ ಅವರನ್ನು ನಗರಕ್ಕೆ ಕರೆ ತಂದು ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭಾವಸಾರ ಕ್ಷೇತ್ರಿಯ ಸಮಾಜದ ಅಧ್ಯಕ್ಷ ಸಂಜುಕುಮಾರ್ ಘನತೆ, ಉಪಾಧ್ಯಕ್ಷ ಪ್ರವೀಣ್ ಸೂರ್ಯನ್ ಹಾಗೂ ರಮೇಶ್ ದೇವತರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.







