ಬೀದರ್ | ಯುವಕನಿಂದ ಕಿರಕುಳ ಆರೋಪ : ಬಾವಿಗೆ ಹಾರಿ ಬಾಲಕಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೀದರ್ (ಭಾಲ್ಕಿ): ಯುವಕನೊಬ್ಬನ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತು ಹದಿನೈದು ವರ್ಷದ ಬಾಲಕಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾಲ್ಕಿ ತಾಲೂಕಿನ ಲಾಧಾ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಭಾಲ್ಕಿ ತಾಲೂಕಿನ ಲಾಧಾ ಗ್ರಾಮದ ನಿವಾಸಿ ಭಾಗ್ಯಲಕ್ಷ್ಮಿ (15) ಮೃತಪಟ್ಟ ಬಾಲಕಿ ಹಾಗೂ ಇದೇ ಗ್ರಾಮದ ನಿವಾಸಿ ಕೃಷ್ಣ (23) ಎಂಬ ಯುವಕನೇ ಬಾಲಕಿಯ ಸಾವಿಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಆರೋಪಿ ಕೃಷ್ಣ ಬಾಲಕಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಈ ವಿಷಯವನ್ನು ಬಾಲಕಿ ಮನೆಯಲ್ಲಿ ತಿಳಿಸಿದಾಗ, ಪೋಷಕರು ಯುವಕನಿಗೆ ಬುದ್ಧಿವಾದ ಹೇಳಿದ್ದರು. ಆಗ ಆತ ಕಿರುಕುಳ ನೀಡುವುದಿಲ್ಲ ಎಂದು ಒಪ್ಪಿಕೊಂಡಿದ್ದರೂ, ತನ್ನ ಚಾಳಿ ಮುಂದುವರಿಸಿದ್ದನು. ಬಾಲಕಿಯ ಮೊಬೈಲ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದನು ಎಂದು ತಿಳಿದು ಬಂದಿದೆ.
ಯುವಕನ ಈ ವರ್ತನೆಯಿಂದ ತೀವ್ರ ಮನನೊಂದಿದ್ದ ಬಾಲಕಿ ಭಾನುವಾರ (ಜ. 18) ಮನೆಯಿಂದ ಹೊರಹೋಗಿದ್ದಳು. ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದರಿಂದ ಬಾಲಕಿ ಅಲ್ಲಿಗೆ ಹೋಗಿರಬಹುದೆಂದು ಕುಟುಂಬಸ್ಥರು ಹುಡುಕಾಡಿದ್ದಾರೆ. ಆದರೆ ಸೋಮವಾರ ಬೆಳಿಗ್ಗೆ ಗ್ರಾಮದ ಬಾವಿಯೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ನನ್ನ ಮಗಳ ಸಾವಿಗೆ ಯುವಕ ಕೃಷ್ಣನೇ ನೇರ ಕಾರಣ. ಆತನ ವಿರುದ್ಧ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತ ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







