ಬೀದರ್ | 4.50 ಕೋಟಿ ರೂ. ಅಭಿವೃದ್ಧಿಯ ಕಾಮಗಾರಿಗಳಿಗೆ ಶಾಸಕ ಪ್ರಭು ಚೌವ್ಹಾಣ್ ರಿಂದ ಚಾಲನೆ

ಬೀದರ್ : ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಸುಮಾರು 4.50 ಕೋಟಿ ರೂ. ಅಭಿವೃದ್ಧಿಯ ಕಾಮಗಾರಿಗಳಿಗೆ ಶಾಸಕ ಪ್ರಭು ಚೌವ್ಹಾಣ್ ಅವರು ಇಂದು ಚಾಲನೆ ನೀಡಿದರು.
ಕಮಲನಗರದಲ್ಲಿ 2 ಕೋಟಿ ರೂ. ವೆಚ್ಚದ ಅಗ್ನಿಶಾಮಕ ಕಚೇರಿ, ಮದನೂರ್ ಹಾಗೂ ಚಾಂದೋರಿಯಲ್ಲಿ 50 ಲಕ್ಷ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸೋರಳ್ಳಿ ತಾಂಡಾದಲ್ಲಿ 55 ಲಕ್ಷ ರೂ., ಶಂಕರ ತಾಂಡಾದಲ್ಲಿ 55.60 ಲಕ್ಷ ರೂ., ಜೀರ್ಗಾ(ಕೆ) ನಲ್ಲಿ 13.90 ಲಕ್ಷ ರೂ. ಮೊತ್ತದ ಹೆಚ್ಚುವರಿ ತರಗತಿ ಕೋಣೆಗಳ ನಿರ್ಮಾಣ. ಮಹಾದೇವ ಪಾಟಿ ತಾಂಡಾದಲ್ಲಿ 6.50 ಲಕ್ಷ ರೂ., ರಾಜೇಂದ್ರ ನಾಯಕ್ ತಾಂಡಾದಲ್ಲಿ 6 ಲಕ್ಷ ರೂ. ಮೊತ್ತದ ಸಿಸಿ ರಸ್ತೆಗಳು. ಸಂಗಮ್ ನಲ್ಲಿ 14.50 ಲಕ್ಷ ರೂ. ವೆಚ್ಚದ ಶಾಲಾ ದುರಸ್ತಿ ಕಾಮಗಾರಿ ಹಾಗೂ ಮುರ್ಕಿ ವಾಡಿಯಲ್ಲಿ 5.90 ಲಕ್ಷ ರೂ. ಮೊತ್ತದ ಸಿಸಿ ಚರಂಡಿ ನಿರ್ಮಾಣಕ್ಕೆ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಎಲ್ಲ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗಾಗಿ ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಅತಿ ತುರ್ತಾಗಿರುವ ಕಾಮಗಾರಿಗಳನ್ನು ಕೈಗೊಂಡಿದ್ದು, ಗುಣಮಟ್ಟದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಲೋಪವಾಗಬಾರದು ಎಂದು ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಎಚ್ಚರಿಸಿದರು.
ಔರಾದ್ ಪ್ರದೇಶದ ಜನರ ಹಿತಾಸಕ್ತಿಯೇ ನನಗೆ ಮುಖ್ಯವಾಗಿದೆ. ಪ್ರತಿ ಗ್ರಾಮಕ್ಕೂ ಅಭಿವೃದ್ಧಿಯ ಲಾಭ ತಲುಪುವಂತೆ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಕ್ಷೇತ್ರದಲ್ಲಿ ಸಾಕಷ್ಟು ನಷ್ಟವಾಗಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಶೀಘ್ರವೇ ಅತೀವೃಷ್ಠಿ ಪ್ರದೇಶವೆಂದು ಘೋಷಿಸಿ ಪರಿಹಾರಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದೇನೆ. ರೈತರು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಪಡಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಔರಾದ್ (ಬಿ) ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಮುಖಂಡರಾದ ಕಿರಣ್ ಪಾಟೀಲ್ ಹಕ್ಯಾಳ್, ಬಸವರಾಜ್ ಪಾಟೀಲ್, ಮಲ್ಲಿಕಾರ್ಜುನ್ ದಾನಾ, ನಾಗನಾಥ್ ಚಿಕ್ಲೆ, ಶಿವಾಜಿರಾವ್ ಪಾಟೀಲ್, ಅನೀಲ್ ಬಿರಾದಾರ್, ಬಾಬುರಾವ್ ತೋರ್ಣಾವಾಡಿ, ಶಿವರಾಜ್ ಅಲ್ಮಾಜೆ, ಶಿವು ಝುಲ್ಫೆ, ಶಿವಕುಮಾರ್ ವಡ್ಡೆ, ನಾಗೇಶ್ ಪತ್ರೆ, ರಂಗರಾವ್ ಜಾಧವ್, ಅಶೋಕ್ ಹಲಮಂಡಗೆ, ಪ್ರಕಾಶ್ ಮೇತ್ರೆ, ಪ್ರಕಾಶ್ ಜೀರ್ಗೆ, ಮಲ್ಲಪ್ಪ ನೇಳಗೆ, ಶಿವರಾಜ್ ಖಳೂರೆ ಹಾಗೂ ಮಾದಪ್ಪ ಗಂಗಾ ಸೇರಿದಂತೆ ಇತರರಿದ್ದರು.







