ಬೀದರ್ | ಪತ್ರಕರ್ತರ ಬಗ್ಗೆ ಹಗುರವಾಗಿ ಮಾತಾನಾಡಿರುವ ಶಾಸಕ ಪ್ರಭು ಚೌವ್ಹಾಣ್ ಕ್ಷಮೆಯಾಚಿಸಲಿ : ಸುಧಾಕರ್ ಕೊಳ್ಳುರ್

ಬೀದರ್ : ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವ ಸಂಘಟನೆಗಳ ವಿರುದ್ಧ ಹಾಗೂ ಅವರ ಸುದ್ದಿಯನ್ನು ಪ್ರಕಟಿಸುವ ಪತ್ರಕರ್ತರ ವಿರುದ್ಧ ಶಾಸಕರು ಬೆದರಿಕೆಯ ಭಾಷೆ ಬಳಸಿರುವುದು ಅತ್ಯಂತ ಖಂಡನೀಯ ಎಂದು ಕಾಂಗ್ರೆಸ್ ವಕ್ತಾರ ಸುಧಾಕರ್ ಕೊಳ್ಳುರ್ ಅವರು ಪ್ರಕಟಣೆಯ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಆಡಳಿತ ವತಿಯಿಂದ ಔರಾದ್ ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ್, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವ ಕೆಲವು ಸಂಘಟನೆಗಳು ಬ್ಲಾಕ್‌ಮೇಲ್ ಮಾಡುತ್ತಿವೆ, ಇವರ ಜೊತೆ ಪತ್ರಕರ್ತರು ಸೇರಿಕೊಂಡು ಸುದ್ದಿ ಮಾಡುತ್ತಿದ್ದಾರೆ. ಹೀಗೆ ಸುದ್ದಿ ಮಾಡಿದರೆ ನಾನೇ ಕೇಸ್ ಹಾಕುತ್ತೇನೆ ಎಂದು ಏರುಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಶಾಸಕರ ಈ ಹೇಳಿಕೆ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಿಗೆ ಧಕ್ಕೆ ತರುವಂತದ್ದು. ಮಾಹಿತಿ ಹಕ್ಕು ಕಾಯ್ದೆಯಡಿ ಕಳಪೆ ಕಾಮಗಾರಿಗಳನ್ನು ಬೆಳಕಿಗೆ ತರುವ ಸಂಘಟನೆಗಳು ಮತ್ತು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸುವವರು ದೇಶದ್ರೋಹಿಗಳೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ಸುಧಾಕರ್ ಕೊಳ್ಳುರ್ ಪ್ರಶ್ನಿಸಿದ್ದಾರೆ.
ತಾಲ್ಲೂಕಿನಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳು ಸಂಪೂರ್ಣವಾಗಿ ಹಾಳಾಗಲು ಶಾಸಕರೇ ನೇರ ಕಾರಣರಾಗಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳನ್ನು ವೈಯಕ್ತಿಕ ಪ್ರಚಾರಕ್ಕಾಗಿ ಬಳಸುವ ಶಾಸಕರು, ತಮ್ಮ ಅವಧಿಯಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಲಿ. ಅವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ, ನಾವು ದಾಖಲೆ ಸಮೇತ ಸಾಬೀತುಪಡಿಸುತ್ತೇವೆ ಎಂದು ಅವರು ಸವಾಲು ಹಾಕಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೆಲಸ ಮಾಡುವ ಸಂಘಟನೆಗಳ ಮುಖಂಡರು ಹಾಗೂ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಪ್ರಭು ಚೌವ್ಹಾಣ್ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸುಧಾಕರ್ ಕೊಳ್ಳುರ್ ಅವರು ಆಗ್ರಹಿಸಿದ್ದಾರೆ.







