ಬೀದರ್| ಅಗ್ನಿ ಅವಘಡದಲ್ಲಿ ಹಾನಿಯಾದ ಅಂಗಡಿಗಳಿಗೆ ಶಾಸಕ ಪ್ರಭು ಚೌವ್ಹಾಣ್ ಭೇಟಿ

ಔರಾದ್: ನಗರದಲ್ಲಿ ಶುಕ್ರವಾರ ತಡರಾತ್ರಿ ಬೆಂಕಿಗಾಹುತಿಯಾದ ಫರ್ನೀಚರ್ ಅಂಗಡಿ, ಚಪ್ಪಲಿ ಅಂಗಡಿ, ಕಿರಾಣಿ ಸ್ಟೋರ್, ತರಕಾರಿ ಮಳಿಗೆಗಳಿಗೆ ಶಾಸಕ ಪ್ರಭು ಚೌವ್ಹಾಣ್ ರವಿವಾರ ಭೇಟಿ ನೀಡಿ, ಮಳಿಗೆಗಳ ಮಾಲಕರಿಗೆ ಧೈರ್ಯ ತುಂಬಿ, ವೈಯಕ್ತಿಕ ಧನಸಹಾಯ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ್, ಅಗ್ನಿ ಅವಘಡ ನಡೆದಿರುವುದು ತೀವ್ರ ಆಘಾತ ಉಂಟು ಮಾಡಿದೆ. ನನ್ನಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ತುರ್ತಾಗಿ ಪತ್ರ ಬರೆದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ನಾನು ನಿಮ್ಮ ಜೊತೆಗೆ ಇದ್ದೇನೆ. ವೈಯಕ್ತಿಕವಾಗಿ ಮತ್ತು ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ತಾವು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳದಿರಿ ಎಂದು ಅಂಗಡಿ ಮಾಲಕರು ಮತ್ತು ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ನಂತರ ಮಾತನಾಡಿದ ಅವರು ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನೊಂದ ವ್ಯಾಪಾರಿಗಳಿಗೆ ನೆರವಾಗುವ ರೀತಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರದಿಂದ ಹೆಚ್ಚಿನ ಪರಿಹಾರ ಕಲ್ಪಿಸಲು ನೆರವಾಗಬೇಕು ಎಂದು ನಿರ್ದೇಶನ ನೀಡಿದರು. ಜೆಸ್ಕಾಂ ಅಧಿಕಾರಿಗಳು ಪಟ್ಟಣದಲ್ಲಿ ಸಂಚರಿಸಿ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಗಮನಿಸಬೇಕು. ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹೇಶ್ ಪಾಟೀಲ್, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿ ಕಾರಬಾರಿ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಗುಂಡಪ್ಪ ಮುಧಾಳೆ, ರಾಮ ನರೋಟೆ, ವೀರಶೆಟ್ಟಿ ಅಲ್ಮಾಜೆ, ಸಂದೀಪ್ ಪಾಟೀಲ್, ಅಶೋಕ ಶಂಬೆಳ್ಳಿ, ರಮೇಶ ಗೌಡಾ, ಆನಂದ ದ್ಯಾಡೆ ಹಾಗೂ ಹಲವರು ಉಪಸ್ಥಿತರಿದ್ದರು.







