ಬೀದರ್ | ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ್ ಭೇಟಿ; ಪರಿಶೀಲನೆ

ಬೀದರ್ : ತಾಲ್ಲೂಕಿನ ಚಿಮ್ಮೇಗಾಂವ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ ಅವರು ಇಂದು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಕಾಮಗಾರಿ ಸ್ಥಳದಲ್ಲಿ ಸಂಚರಿಸಿ ಸ್ಥಳದಲ್ಲಿದ್ದ ಅಧಿಕಾರಿಗಳ ಮೂಲಕ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಅವರು, ಟವರ್ ಗಳ ನಿರ್ಮಾಣ, ಕಟ್ಟಡ ನಿರ್ಮಾಣ ಸ್ಥಳ ಮತ್ತು ಯಂತ್ರಗಳ ಬಳಿಗೆ ತೆರಳಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಿದರು.
ಬುನಾದಿ ಕಾಮಗಾರಿಯಲ್ಲಿ ಸರಿಯಾಗಿ ಕ್ಯೂರಿಂಗ್ ಮಾಡದ ಕಾರಣ ಸಿಮೆಂಟ್ ಎದ್ದು ಕಾಣುತ್ತಿದೆ. ಬೇಸಿಗೆ ಆರಂಭವಾಗಿದ್ದು, ಬಿಸಿಲು ಹೆಚ್ಚುತ್ತಿದೆ. ಬಿಸಿಲಿನಲ್ಲಿ ಸಿಮೆಂಟ್ ಕೆಲಸಗಳಿಗೆ ನೀರಿನ ಬಳಕೆ ಮಾಡಬೇಕು. ಆದರೆ ಏಕೆ ಮಾಡುತ್ತಿಲ್ಲ ಎಂದು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ನಾನು ಸಾಕಷ್ಟು ಪ್ರಯತ್ನಪಟ್ಟು 2,147 ಕೋಟಿ ರೂ. ಮೊತ್ತದ 675 ಕೆ.ವಿ ಸಾಮರ್ಥ್ಯದ ಕರ್ನಾಟಕ ಮೊದಲ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರವನ್ನು ನನ್ನ ಕ್ಷೇತ್ರಕ್ಕೆ ತಂದಿದ್ದೇನೆ. ಕೆಲಸ ಸರಿಯಾಗಿ ಮತ್ತು ಗುಣಮಟ್ಟದಿಂದ ಆಗಬೇಕು. ಶೀಘ್ರ ಪೂರ್ಣಗೊಳಿಸುವ ಭರದಲ್ಲಿ ಕೆಲಸ ಕಳಪೆ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಗುಣಮಟ್ಟದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪವರ್ ಗ್ರಿಡ್ ಉಪ ಕೇಂದ್ರದ ಸುತ್ತಲಿನ ರೈತರಿಗೆ ಓಡಾಡಲು ಹಿಂದಿನಿಂದಲೂ ಬಳಕೆ ಮಾಡುತ್ತಿದ್ದ ಕಾಲುದಾರಿ ಮುಚ್ಚಿದ್ದರಿಂದ ರೈತರು ತಮ್ಮ ಕೃಷಿ ಜಮೀನಿಗೆ ಹೋಗಲು 7-8 ಕಿ.ಮೀ ಸುತ್ತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಈ ಸಮಸ್ಯೆಗೆ ತಹಸೀಲ್ದಾರರ ಸಹಾಯ ಪಡೆದು ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ಯಾವುದೇ ರೀತಿಯ ಸಮಸ್ಯೆ ಮಾಡಬಾರದು ಎಂದು ತಿಳಿಸಿದರು.
ಸ್ಥಳೀಯರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಯೋಜನೆ ತಂದಿದ್ದೇನೆ. ಆದರೆ ಕೆಲಸಗಾರರನ್ನು ಬೇರೆಡೆಯಿಂದ ತರುತ್ತಿರುವ ಬಗ್ಗೆ ಜನತೆ ಹೇಳುತ್ತಿದ್ದಾರೆ. ಕೆಲಸಗಾರರ ನೇಮಕಾತಿಯಲ್ಲಿ ಕಮಲನಗರ ಮತ್ತು ಔರಾದ(ಬಿ) ತಾಲ್ಲೂಕಿನವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ತಾಂತ್ರಿಕ ಸಿಬ್ಬಂದಿಗಳು ಸ್ಥಳೀಯರು ಲಭ್ಯವಿಲ್ಲದ ಪಕ್ಷದಲ್ಲಿ ಬೇರೆಯರವನ್ನು ತರಬಹುದು. ಆದರೆ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಯೋಜನೆಗೆ ಜಮೀನು ನೀಡಿದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಕಾಮಗಾರಿ ಸ್ಥಳದಲ್ಲಿ ಟ್ರ್ಯಾಕ್ಟರ್, ಟಿಪ್ಪರ್, ಜೆಸಿಬಿ, ನೀರಿನ ಟ್ಯಾಂಕ್ ಹೀಗೆ ವಿವಿಧ ಯಂತ್ರಗಳನ್ನು ಬಾಡಿಗೆಗೆ ಪಡೆದು ಕೆಲಸ ಮಾಡಲಾಗುತ್ತಿದೆ. ಇವುಗಳನ್ನು ಸ್ಥಳೀಯರಿಂದಲೇ ಪಡೆದು ಇವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಣೇಶ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ್ದೇನೆ. ಸರಿಯಾಗಿ ಕ್ಯೂರಿಂಗ್ ಆಗುತ್ತಿಲ್ಲ. ಸರಿಯಾಗಿ ನಿಗಾವಹಿಸಿ, ಗುಂಡಿಗಳನ್ನು ಅಗೆಯಲು ಸ್ಪೋಟಕಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಸುತ್ತಲಿನಲ್ಲಿರುವ ಬೋರವೆಲ್ ನೀರು ಬತ್ತಿ ಹೋಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ಡ್ರಿಲ್ಲಿಂಗ್ ಮೂಲಕ ಗುಂಡಿ ಅಗೆಯಬೇಕು. ತೀವ್ರ ಅವಶ್ಯಕತೆಯ ಸಂದರ್ಭ ಇದ್ದಾಗ ಮಾತ್ರ ಸ್ಪೋಟಕ ಬಳಸಬೇಕು. ಸ್ಥಳೀಯರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಮಲನಗರ ತಹಶೀಲ್ದಾರ್ ಅಮೀತಕುಮಾರ್ ಕುಲಕರ್ಣಿ, ಔರಾದ(ಬಿ) ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧಾ ಸಂತೋಷ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ್ ಅಲ್ಮಾಜೆ, ಪ್ರವೀಣ್ ಕಾರಬಾರಿ, ಬಾಬುರಾವ್ ತೋರ್ಣಾವಾಡಿ, ಸಚಿನ್ ರಾಠೋಡ್, ರಾಜಕುಮಾರ್ ಅಲಬಿದೆ, ಸಚಿನ್ ಬಿರಾದಾರ್, ಅನೀಲ್ ಬಿರಾದಾರ್ ಸೇರಿದಂತೆ ಪವರ್ ಗ್ರಿಡ್ ಕಾರ್ಪೋರೇಷನ್ ಅಧಿಕಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







