Bidar | 7 ಕೋಟಿ ರೂ. ವೆಚ್ಚದ ಬಿಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ರಹೀಂ ಖಾನ್ ಚಾಲನೆ

ಬೀದರ್: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿಯಲ್ಲಿ ಮಂಜೂರಾಗಿರುವ ಒಟ್ಟು 37.50 ಕೋಟಿ ರೂ. ಮೊತ್ತದ ಅಭಿವೃದ್ಧಿ ಪ್ಯಾಕೇಜ್ನ ಭಾಗವಾಗಿ, 7 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಗರದ ಬೀದ್ರಿ ಚೌಕ್ನಿಂದ ಕುಂಬಾರವಾಡ ಕಮಾನ್ವರೆಗೆ ನಿರ್ಮಾಣಗೊಳ್ಳಲಿರುವ ಬಿಟಿ ರಸ್ತೆ ಕಾಮಗಾರಿಗೆ ಶಾಸಕ ರಹೀಂ ಖಾನ್ ಅವರು ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದರ್ ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ಸುಮಾರು 100 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಇದಲ್ಲದೆ, ಮುಂದಿನ ದಿನಗಳಲ್ಲಿ ಬೀದರ್ ನಗರಸಭೆ ಅಥವಾ ಮಹಾನಗರ ಪಾಲಿಕೆಯ ಮೂಲಕ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಯೋಜನೆಯಿದೆ. ನಗರದ ರಸ್ತೆ ಸಂಪರ್ಕ, ಮೂಲಸೌಕರ್ಯ ಹಾಗೂ ನಾಗರಿಕ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಕಾಮಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಕಾಂತ್ ಚಿಮಕೋಡೆ, ಸಹಾಯಕ ಅಭಿಯಂತರರು, ಗುತ್ತಿಗೆದಾರ ಸಚಿನ್ ಕೊಳ್ಳೂರು, ಮಹಾನಗರ ಪಾಲಿಕೆ ಸದಸ್ಯ ನವಾಜ್ ಖಾನ್, ಧನರಾಜ್ ಹಂಗರಗಿ, ಮೋಹನ್ ಕಾಳೇಕರ್, ಪ್ರಶಾಂತ್ ದೊಡ್ಡಿ, ಶೌಕತ್ ಅಲಿ, ಕಾಂಗ್ರೆಸ್ ಮುಖಂಡರಾದ ಇಸಾಕ್ ಸೆರಿಕಾರ್, ಅಮ್ಜದ್ ಅಲಿ ಹಾಗೂ ಇಮ್ರಾನ್ ಲಾಲವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






