Bidar | ಪ್ರಜಾಸೇವಾ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ರಹೀಂ ಖಾನ್

ಬೀದರ್ : ಚಿಲ್ಲರ್ಗಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಜಾಸೇವಾ ಸಭೆಯಲ್ಲಿ ಶಾಸಕ ರಹೀಂ ಖಾನ್ ಅವರು ಸಮಾಜದ ವಿವಿಧ ವರ್ಗಗಳ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಸಭೆಯಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ವಿಧವೆಯರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗಗಳ ಜನರು ಸೇರಿದಂತೆ ವಿವಿಧ ವರ್ಗಗಳ ಸಾರ್ವಜನಿಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಬೆಳೆ ನಷ್ಟ, ಶಾಲಾ ಮೂಲಸೌಕರ್ಯ, ಶಿಕ್ಷಣ ಸಾಲ, ರೈತರ ಸಬ್ಸಿಡಿ, ಪಶುಸಂಗೋಪನೆ, ಗ್ರಾಮೀಣ ವಸತಿ ಹಾಗೂ ಜೀವನೋಪಾಯ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ ಶಾಸಕ ರಹೀಂ ಖಾನ್, ತುರ್ತಾಗಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಉಳಿದ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು, ನಿಯಮಾನುಸಾರ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರ್‌ವೆಲ್ ಕಾಮಗಾರಿಗೆ ಚಾಲನೆ :
ಚಿಲ್ಲರ್ಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮದ ಮಾಳೆಗಾಂವ್ ರಸ್ತೆಯಲ್ಲಿ ಬೋರ್‌ವೆಲ್ ಕೊರೆತ ಕಾಮಗಾರಿಗೆ ಶಾಸಕ ರಹೀಂ ಖಾನ್ ಚಾಲನೆ ನೀಡಿದರು. ಗ್ರಾಮಸ್ಥರಿಗೆ ಶೀಘ್ರದಲ್ಲೇ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.






