ಬೀದರ್ | ‘ಆಪರೇಷನ್ ಅಭ್ಯಾಸ್’ ಅಣಕು ಪ್ರದರ್ಶನ

ಬೀದರ್ : ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನ ನಡೆಯಿತು.
ನಗರದ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ರಕ್ಷಣಾ ಅಣಕು ಪ್ರದರ್ಶನ ಯಶಸ್ವಿಯಾಯಿತು.
ಅಣಕು ಪ್ರದರ್ಶನದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು, ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಆಪರೇಷನ್ ಅಭ್ಯಾಸ ಹೆಸರಿನ ನಾಗರಿಕ ರಕ್ಷಣಾ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನವು ಯಶಸ್ವಿಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ, ತುರ್ತು ಪರಿಸ್ಥಿತಿ ವೇಳೆ ನಾಗರಿಕರು ಮತ್ತು ವಿವಿಧ ಇಲಾಖೆಗಳು ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ನಾಗರಿಕರು ತುರ್ತು ಪರಿಸ್ಥಿತಿಯಲ್ಲಿ ಭಯಪಡದೆ ಅದನ್ನು ಹೇಗೆ ಎದುರಿಸಬೇಕು ಎಂದು ತಿಳಿಸಿದರು.
ಈ ಅಣಕು ಪ್ರದರ್ಶನದಲ್ಲಿ ರೈಲ್ವೆ ಪೊಲೀಸರು ಮತ್ತು ಸಿಬ್ಬಂದಿಗಳು ಸಂಪೂರ್ಣ ಸಹಯೋಗ ನೀಡಿದರು. ಪೋಲಿಸ್ ಇಲಾಖೆಯಿಂದ 300 ಪೋಲಿಸರು ಈ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ, ಜಿಲ್ಲಾ ಉಪವಿಭಾಗಾಧಿಕಾರಿ ಎಂ.ಡಿ ಶಕೀಲ್, ಕೆ.ಎಸ್.ಆರ್.ಟಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ್ ಪುಲೇಕರ್, ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಧ್ಯಾನೇಶ್ವರ್ ನಿರಗುಡೆ, ಜಿಲ್ಲಾ ಶಸ್ತ್ರ ಚಿಕಿತ್ಸಾ ಅಧಿಕಾರಿ ಅಹಮದ್, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಎಂ.ಡಿ. ಮುಜಾಮಿಲ್ ಪಟೇಲ್, ಜಿಲ್ಲಾ ಗೃಹರಕ್ಷಕ ದಳದ ಅಧಿಕಾರಿ ಮನೋಜಕುಮಾರ್ ಪಾಟೀಲ್, ಬೀದರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ರಮೇಶ್ ಶಿರಪತಿ, ಲಿಂಗಾನಂದ್, ಮುಜಿಬ್, ಕುಂದನಕುಮಾರ್, ಆರ್.ಪಿ.ಎಫ್. ಇನ್ಸಪೆಕ್ಟರ್ ಪ್ರಸಾದ್, ಪಿಎಸ್ಐ ಸುಧೀರ್ ರೆಡ್ಡಿ, ಜಿಲ್ಲಾಧಿಕಾರಿ ಕಚೇರಿ ವಿಪತ್ತು ನಿರ್ವಹಣಾ ಪರಿಣೀತ ಸಂದಿಪ್ ಪಾಟೀಲ್, ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರ ರಾಜಕುಮಾರ್ ಮಾಳಗೆ ಹಾಗೂ ಗೃಹ ರಕ್ಷಕ ದಳ, ನರ್ಸಿಂಗ್ ವಿದ್ಯಾರ್ಥಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.







