Bidar | ಎಸ್‌ಐಆರ್ ಸಮೀಕ್ಷೆಯಲ್ಲಿ ಪಾಲ್ಗೊಂಡ ಸಂಸದ ಸಾಗರ್ ಖಂಡ್ರೆ

ಬೀದರ್: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಂಗವಾಗಿ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆ ವೇಳೆ ಸಂಸದ ಸಾಗರ್ ಖಂಡ್ರೆ ಅವರು ಗುರುವಾರ ಭಾಲ್ಕಿಯ ತಮ್ಮ ನಿವಾಸದಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅವರಿಗೆ ಅಗತ್ಯ ದಾಖಲೆಗಳು ಹಾಗೂ ಮಾಹಿತಿ ನೀಡಿ ತಮ್ಮ ಮತದಾರರ ವಿವರಗಳನ್ನು ನೋಂದಾಯಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೂನ್ 30ರಿಂದ ಜುಲೈ 29ರವರೆಗೆ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮನೆಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸಿ, ತಮ್ಮ ಹೆಸರು ಹಾಗೂ ಇತರ ವಿವರಗಳು ಮತದಾರರ ಪಟ್ಟಿಯಲ್ಲಿ ನಿಖರವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸಂಸದ ಸಾಗರ್ ಖಂಡ್ರೆ ಕರೆ ನೀಡಿದರು.






