Bidar | ಬ್ರಿಮ್ಸ್ ಆಸ್ಪತ್ರೆಗೆ ಸಂಸದ ಸಾಗರ್ ಖಂಡ್ರೆ ಭೇಟಿ

ಬೀದರ್ : ಜಿಲ್ಲಾ ಬ್ರಿಮ್ಸ್ ಆಸ್ಪತ್ರೆಯಲ್ಲಿ ಪಿಜಿ ಪ್ರಥಮ ವರ್ಷದ ಅರ್ಥೋಪೆಡಿಕ್ ವಿದ್ಯಾರ್ಥಿ ಡಾ.ತುಕಾರಾಂ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸಂಸದ ಸಾಗರ ಖಂಡ್ರೆ ತೀವ್ರವಾಗಿ ಖಂಡಿಸಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಗೆ ಶುಕ್ರವಾರ ಸಾಯಂಕಾಲ ಭೇಟಿ ನೀಡಿದ ಸಂಸದ ಸಾಗರ್ ಖಂಡ್ರೆ ಅವರು, ಗಾಯಗೊಂಡಿರುವ ಡಾ.ತುಕಾರಾಂ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.
ಘಟನೆಯ ಬಳಿಕ ಮಾತನಾಡಿದ ಸಂಸದ ಸಾಗರ ಖಂಡ್ರೆ, ಜೀವ ಉಳಿಸುವ ವೈದ್ಯರ ಮೇಲೆಯೇ ಹಲ್ಲೆ ನಡೆಯುತ್ತಿರುವುದು ಅತ್ಯಂತ ದುಃಖಕರ ಮತ್ತು ಖಂಡನೀಯ ಸಂಗತಿ. ವೈದ್ಯರ ಮೇಲೆ ಇಂತಹ ದಾಳಿಗಳು ಮರುಕಳಿಸಬಾರದು ಎಂದರು.
ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಸೂಕ್ತ ತನಿಖೆ ನಡೆಸಿ ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಈ ಹಿಂದೆ ಕರ್ತವ್ಯದಲ್ಲಿದ್ದ ಮೂವರು ಪೊಲೀಸರ ಬದಲಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಹೊಸ ಭದ್ರತಾ ಏಜೆನ್ಸಿಯ ಮೂಲಕ ಸುಮಾರು 50 ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಭರವಸೆ ನೀಡಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವೈದ್ಯರ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು, ರಾತ್ರಿ-ಹಗಲು ಸೇವೆ ಸಲ್ಲಿಸುವ ವೈದ್ಯರಿಗೆ ಭದ್ರತೆ ಒದಗಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ ಸೇರಿದಂತೆ ವೈದ್ಯಕೀಯ ಅಧೀಕ್ಷಕರು ಹಾಜರಿದ್ದರು.






