Bidar | ಎಸೆಸೆಲ್ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕ ನೀಡುವಂತೆ ಮುಹಮ್ಮದ್ ಆಸಿಫೋದ್ದಿನ್ ಒತ್ತಾಯ

ಬೀದರ್ : ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದು ಸೂಕ್ತ ಸಮಯವಲ್ಲ. ಈ ವರ್ಷದ ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಅಭ್ಯಾಸ ಮಾಡಿರುವುದರಿಂದ ಅವರಿಗೆ ಅಂಕಗಳನ್ನು ನೀಡಬೇಕು ಎಂದು ವಿಸ್ಡಮ್ ಕಾಲೇಜಿನ ಚೇರ್ಮನ್ ಮುಹಮ್ಮದ್ ಆಸಿಫೋದ್ದಿನ್ ಅಭಿಪ್ರಾಯಪಟ್ಟರು.
ನಗರದ ವಿಸ್ಡಮ್ ಕಾಲೇಜಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲಾಗುತ್ತದೆ ಎಂಬ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆ ಆಶ್ಚರ್ಯಕರವಾಗಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡಿದೆ ಎಂದರು.
ಇಂತಹ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆದು, ವಿಧಾನಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಕೋಠಾರಿ ಆಯೋಗದ ಮೂರು ಭಾಷಾ ಸೂತ್ರವನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಜೊತೆಗೆ ತೆಲುಗು, ಮರಾಠಿ, ತುಳು, ಕೊಂಕಣಿ, ಅರೇಬಿಕ್, ಸಂಸ್ಕೃತ, ಇಂಗ್ಲಿಷ್ ಹಾಗೂ ಕನ್ನಡ ಸೇರಿದಂತೆ ಒಂಬತ್ತು ತೃತೀಯ ಭಾಷೆಗಳಿವೆ. ಈ ಭಾಷೆಗಳಿಗೆ ಅಂಕ ನೀಡದೆ ಗ್ರೇಡ್ ನೀಡಿದರೆ ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ಬಹುಭಾಷಾ ಅಧ್ಯಯನಕ್ಕೆ ಯೋಗ್ಯರಾಗಿದ್ದು, ತೃತೀಯ ಭಾಷೆಯನ್ನು ತೆಗೆದುಹಾಕುವುದು ಸೂಕ್ತವಲ್ಲ. ಬಹುತೇಕ ಉದ್ಯೋಗಾವಕಾಶಗಳು ಎಸೆಸೆಲ್ಸಿ ನಂತರ ಲಭ್ಯವಾಗುವ ಕಾರಣ, ಈ ನಿರ್ಧಾರದಿಂದ ಯುವಕರಿಗೆ ಹಾನಿಯಾಗಬಹುದು ಎಂದರು.
ಆದ್ದರಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಎಲ್ಲರ ಅಭಿಪ್ರಾಯ ಪಡೆದು ಚರ್ಚೆಯ ನಂತರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಮುಹಮ್ಮದ್ ಸಲೀಂ ಉಪಸ್ಥಿತರಿದ್ದರು.







